Delhi: ಇಂದು ಬೆಳಗ್ಗೆ ದೆಹಲಿ High Court ಬಾಂಬ್ ಬೆದರಿಕೆ ಇ-ಮೇಲ್ ಮೂಲಕ ಬಂದಿದೆ. ಇದರಿಂದ ನ್ಯಾಯಾಲಯದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸದ್ಯಕ್ಕೆ ಕೋರ್ಟ್ ಆವರಣವನ್ನು ಖಾಲಿ ಮಾಡಲಾಗಿದೆ ಮತ್ತು ಎಲ್ಲಾ ಕಲಾಪಗಳನ್ನು ಮುಂದೂಡಲಾಗಿದೆ.
ಪೋಲಿಸರಿಗೆ ಬಾಂಬ್ ಇಡಲಾಗಿದೆ ಎಂದು ಸಂದೇಶ ಬಂದ ನಂತರ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ High Court ನಲ್ಲಿ ತೀವ್ರ ಶೋಧ ನಡೆಸಿದೆ. ಇದರಿಂದ ನ್ಯಾಯಾಧೀಶರು ತಾತ್ಕಾಲಿಕವಾಗಿ ಪೀಠದಿಂದ ಹೊರಬರಬೇಕಾಯಿತು.
ಬೆಳಗ್ಗೆ 8.39ರ ಸುಮಾರಿಗೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಈ ಇ-ಮೇಲ್ ಬಂದಿದ್ದು, ವಿಚಾರಣೆ ನಡೆಯುತ್ತಿದ್ದಾಗಲೇ ಕೋರ್ಟ್ ಸಿಬ್ಬಂದಿ ಬಾಂಬ್ ಬೆದರಿಕೆಯ ಮಾಹಿತಿ ನೀಡಿದರು. ಕೆಲವು ನ್ಯಾಯಾಧೀಶರು ಬೆಳಗ್ಗೆ 11.35ಕ್ಕೆ ಹೊರಬಂದರೆ, ಇತರರು ಮಧ್ಯಾಹ್ನ 12 ಗಂಟೆಯವರೆಗೆ ಕಲಾಪಗಳನ್ನು ನಡೆಸಿದರು.
ಸದ್ಯ ಕೋರ್ಟ್ ಆವರಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕೋರ್ಟ್ ಆವರಣದಲ್ಲಿದ್ದ ವಕೀಲರು, ಸಿಬ್ಬಂದಿ ಮತ್ತು ಗುಮಾಸ್ತರು ಸ್ಥಳವನ್ನು ಖಾಲಿ ಮಾಡಿದ್ದಾರೆ. ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸ್ಥಳದಲ್ಲಿ ಶೋಧ ನಡೆಸಿದ್ದಾರೆ. ತನಿಖಾ ಸಂಸ್ಥೆಗಳು ಬಂದ ಇ-ಮೇಲ್ ಬಗ್ಗೆ ತನಿಖೆ ಆರಂಭಿಸಿವೆ. ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಲಾಪಗಳು ಮಧ್ಯಾಹ್ನ ಮುಂದುವರಿಯಲಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿ ನಗರದಲ್ಲಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ದ್ವಾರಕಾದ ಡೆಹಲಿ ಪಬ್ಲಿಕ್ ಸ್ಕೂಲ್ (DPS), ಮಾಡ್ರನ್ ಕಾನ್ವೆಂಟ್ ಸ್ಕೂಲ್, ಶ್ರೀರಾಮ್ ವರ್ಲ್ಡ್ ಶಾಲೆಗಳಿಗೆ ಬೆದರಿಕೆ ಬಂದಿದೆ. ಇದಕ್ಕೂ ಮುನ್ನ ಪಶ್ಚಿಮ ವಿಹಾರ್ನ ರಿಚ್ಮಂಡ್ ಗ್ಲೋಬಲ್ ಶಾಲೆ, ರೋಹಿಣಿ ಸೆಕ್ಟರ್ 24 ರ ಸಾವರಿನ್ ಶಾಲೆ, ದ್ವಾರಕಾ ಸೆಕ್ಟರ್ 19 ರ ಮಾಡರ್ನ್ ಇಂಟರ್ನ್ಯಾಷನಲ್ ಶಾಲೆ ಮತ್ತು ರೋಹಿಣಿ ಸೆಕ್ಟರ್ 23 ರ ಹೆರಿಟೇಜ್ ಶಾಲೆಗಳಿಗೆ ಸಹ ಬಾಂಬ್ ಬೆದರಿಕೆಗಳು ಬಂದಿವೆ. ಜುಲೈ 18ರಂದು ದೆಹಲಿ ವಿಶ್ವವಿದ್ಯಾಲಯದ ಮೂರು ಕಾಲೇಜುಗಳಿಗೂ ಇ-ಮೇಲ್ ಮೂಲಕ ಬೆದರಿಕೆಗಳು ಬಂದಿದ್ದವು.