ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ ಎಂದು ಆರೋಪಿಸಿದರು. ಸರ್ಕಾರ ಅಲ್ಪಸಂಖ್ಯಾತರ ಭಾವನೆಗಳಿಗೆ ಮಾತ್ರ ಮಹತ್ವ ನೀಡುತ್ತಿದೆ, ಹಿಂದೂಗಳ ಪರ ಯಾವುದೇ ಯೋಜನೆ ಇಲ್ಲ ಎಂದು ಟೀಕಿಸಿದರು.
ಪ್ರತಿ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕೆಲ ವರ್ಗಗಳಿಗೆ ಮಾತ್ರ ಯೋಜನೆ ಹಾಗೂ ಅನುದಾನ ಘೋಷಿಸಲಾಗುತ್ತಿದೆ. ಆದರೆ ಹಿಂದೂಗಳಿಗೆ ಏನೂ ಸಿಗುತ್ತಿಲ್ಲ. ಕೇರಳದಲ್ಲಿ ಆನೆ ದಾಳಿಯಿಂದ ಸಾವಿಗೀಡಾದವರಿಗೆ ಪರಿಹಾರ ನೀಡಿದರೆ, ನಮ್ಮ ರಾಜ್ಯದಲ್ಲಿ ಸಾವಿಗೀಡಾದವರಿಗೆ ಸಹಾಯವಿಲ್ಲ ಎಂದು ಹೇಳಿದರು.
ಕೇರಳದಲ್ಲಿ ಪ್ರಿಯಾಂಕಾ ಗಾಂಧಿ ಕ್ಷೇತ್ರಕ್ಕೆ 10 ಕೋಟಿ ರೂ. ನೀಡಿದರೆ, ನಮ್ಮ ಶಾಸಕರು ಕೇಳಿದರೆ ಹಣವಿಲ್ಲ ಎಂದು ಸರ್ಕಾರ ಹೇಳುತ್ತದೆ. ಆರ್ಸಿಬಿ ಕಾಲ್ತುಳಿತದಲ್ಲಿ ಸಾವಿಗೀಡಾದವರಿಗೆ ಪರಿಹಾರ ಕೊಟ್ಟರೂ, ಗಣಪತಿ ಮೆರವಣಿಗೆಯಲ್ಲಿ ಸಾವಿಗೀಡಾದವರಿಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರಿನ ಗಲಾಟೆಗೆ ನೇರವಾಗಿ ಸಿಎಂ, ಡಿಸಿಎಂ ಹೊಣೆ ಎಂದು ಅವರು ಆರೋಪಿಸಿದರು. ಮೆರವಣಿಗೆಯ ಸಮಯದಲ್ಲಿ ಅಷ್ಟೊಂದು ಕಲ್ಲುಗಳು ಹೇಗೆ ಬಂತು, ಯಾರಿಂದ ಬಂದವು ಎಂಬುದನ್ನು ಪೊಲೀಸರು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಚಾಮುಂಡಿ ಬೆಟ್ಟ ಹಿಂದುಗಳದ್ದು ಅಲ್ಲ ಎಂಬ ಸರ್ಕಾರದ ನಿಲುವು ತೀವ್ರ ವಿರೋಧಾರ್ಹ ಎಂದು ಹೇಳಿದರು. ಹಿಂದುಗಳ ಧಾರ್ಮಿಕ ಪರಂಪರೆ, ದಸರಾ ಸಂಪ್ರದಾಯವನ್ನು ಕಾಪಾಡುವ ಮನಸ್ಸೇ ಸರ್ಕಾರಕ್ಕಿಲ್ಲ ಎಂದು ಆರೋಪಿಸಿದರು.
ಶಿವಮೊಗ್ಗದಲ್ಲಿ ಔರಂಗಜೇಬನ ಕತ್ತಿ ಪ್ರದರ್ಶನಕ್ಕೆ ಅವಕಾಶ ನೀಡಿರುವುದನ್ನು ಖಂಡಿಸಿದರು. ಹಿಂದೂಗಳನ್ನು ಕೊಂದ ಔರಂಗಜೇಬನ ಕತ್ತಿ ಹಿಂದೂಗಳ ರಕ್ತದಿಂದ ಕಲ್ಮಶವಾಗಿದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ತಡವಾಗಿದೆ. 2019ರಲ್ಲಿ ಟೆಂಡರ್ ಆಗಿದ್ದರೂ 2022ರಲ್ಲಿ ಪೂರ್ಣಗೊಳ್ಳಬೇಕಾದ ಕೆಲಸ ಇನ್ನೂ ಮುಗಿದಿಲ್ಲ. ಮುಂದಿನ ಏಪ್ರಿಲ್-ಮೇ ವೇಳೆಗೆ ಕೆಲಸ ಮುಗಿಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.