ಲಂಡನ್‌ನಲ್ಲಿ ವಲಸಿಗರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕೀರ್ ಸ್ಟಾರ್ಮರ್ ಹೇಳುವಂತೆ, ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಎಲ್ಲರಿಗೂ ಹಕ್ಕು. ಆದರೆ ಬಣ್ಣ ಅಥವಾ ಜಾತಿ ಆಧಾರದ ಮೇಲೆ ನಾಗರಿಕರನ್ನು ಟಾರ್ಗೆಟ್ ಮಾಡುವುದು ಸಹನೀಯವಲ್ಲ.
ಅಧಿಕಾರಿಗಳ ಮೇಲೆ ದಾಳಿ ಮಾಡುವುದು ಕಾನೂನು ಉಲ್ಲಂಘನೆ. ಬ್ರಿಟನ್ ಸಹಿಷ್ಣುತೆ, ವೈವಿಧ್ಯತೆ ಮತ್ತು ಗೌರವದ ಮೇಲೆ ನಿರ್ಮಾಣಗೊಂಡಿದೆ. ರಾಷ್ಟ್ರಧ್ವಜವು ಒಗ್ಗಟ್ಟಿನ ಸಂಕೇತ. ಅದನ್ನು ಹಿಂಸೆಗಾಗಿ ಬಳಸಲು ಅವಕಾಶವಿಲ್ಲ ಎಂದಿದ್ದಾರೆ.
ಲಂಡನ್ನಿನ ಬೀದಿಗಳಲ್ಲಿ ನಡೆದ ವಲಸೆ ವಿರೋಧಿ ರ್ಯಾಲಿಯಲ್ಲಿ ಒಂದು ಮಿಲಿಯನ್ ಜನರು ಪಾಲ್ಗೊಂಡಿದ್ದರು. ಪೊಲೀಸರು ನಿಯಂತ್ರಿಸಲು ಪ್ರಯತ್ನಿಸಿದಾಗ ಕೆಲವರು ನೀರಿನ ಬಾಟಲಿ, ವಸ್ತುಗಳಿಂದ ದಾಳಿ ಮಾಡಿದರು. ಇದನ್ನು ಪ್ರಧಾನಿಯವರು ತೀವ್ರವಾಗಿ ಖಂಡಿಸಿದರು. ಬ್ರಿಟನ್ ಹಿಂಸಾಚಾರದ ಮುಂದೆ ಎಂದಿಗೂ ಶರಣಾಗುವುದಿಲ್ಲ.
ಈ ವರ್ಷ ಮಾತ್ರ 28,000 ಕ್ಕೂ ಹೆಚ್ಚು ವಲಸಿಗರು ಸಮುದ್ರಮಾರ್ಗದ ಮೂಲಕ ಬ್ರಿಟನ್‌ಗೆ ಬಂದಿದ್ದಾರೆ. ಅನೇಕರು ಆಶ್ರಯ ಪಡೆದಿದ್ದು, ಸರ್ಕಾರವೇ ಅವರಿಗೆ ತಾತ್ಕಾಲಿಕ ವಸತಿ ಕಲ್ಪಿಸಿದೆ. ಇದರ ಪರಿಣಾಮ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚಾಗಿದೆ. ವಲಸಿಗರು ಉದ್ಯೋಗ ಮತ್ತು ಸಂಪನ್ಮೂಲಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ರ್ಯಾಲಿಯಲ್ಲಿ ಪ್ರತಿಭಟನಾಕಾರರು ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಪ್ರದರ್ಶಿಸಿದರು. “ದೋಣಿಗಳನ್ನು ನಿಲ್ಲಿಸಿ, ಅವನ್ನು ಹಿಂದಕ್ಕೆ ಕಳುಹಿಸಿ, ದೇಶವನ್ನು ನಮಗೆ ಮರಳಿ ನೀಡಿ” ಎಂಬ ಘೋಷಣೆಗಳನ್ನು ಕೂಗಿದರು. ಬ್ರಿಟಿಷ್ ಆರ್ಥಿಕತೆ ಈಗಾಗಲೇ ಸಂಕಷ್ಟದಲ್ಲಿರುವಾಗ, ವಲಸೆ ಭಾರವಾಗಿದೆ ಎಂದು ಪ್ರತಿಭಟನಾಕಾರರು ಹೇಳುತ್ತಾರೆ.
ಬಲಪಂಥೀಯ ಚಿಂತಕ ಟಾಮಿ ರಾಬಿನ್ಸನ್ ಈ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅವರ ನಿಜವಾದ ಹೆಸರು ಸ್ಟೀಫನ್ ಅಕ್ಲಿ ಲ್ಯಾನನ್. ವೃತ್ತಿಯಲ್ಲಿ ಪತ್ರಕರ್ತನಾದ ಅವರು, ಸರ್ಕಾರದ ವಿರುದ್ಧ ಪದೇ ಪದೇ ಧ್ವನಿ ಎತ್ತಿದ್ದಾರೆ. ಈತನಿಗೆ ಎಲಾನ್ ಮಸ್ಕ್ ಸೇರಿದಂತೆ ಗಣ್ಯರಿಂದ ಬೆಂಬಲವಿದೆ. “ದೇಶ ಅಪಾಯದಲ್ಲಿದೆ, ಹೋರಾಡಿ ಅಥವಾ ಮಡಿ” ಎಂದು ಅವರು ವರ್ಚುವಲ್ ಭಾಷಣದಲ್ಲಿ ಕರೆ ನೀಡಿದ್ದಾರೆ.