Bengaluru/Koppala: ದಲಿತ ಮಹಿಳೆಯ ಬಗ್ಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕರ್ನಾಟಕ ಹೈಕೋರ್ಟ್ (High Court) ದೊಡ್ಡ ತಾತ್ಕಾಲಿಕ ರಿಲೀಫ್ ನೀಡಿದೆ.
ಕೊಪ್ಪಳದಲ್ಲಿ ಅಟ್ರಾಸಿಟಿ ಕಾಯ್ದೆಯಡಿ ದಾಖಲಾಗಿದ್ದ FIR ವಿರುದ್ಧ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ಹೈಕೋರ್ಟ್, ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶಿಸಿದೆ. ಜೊತೆಗೆ ಯತ್ನಾಳ್ ತನಿಖೆಗೆ ಸಹಕರಿಸಬೇಕು ಎಂದೂ ಸೂಚಿಸಿದೆ.
“ಯಾವುದೇ ಪಕ್ಷದವರೇ ಆಗಲಿ, ಒಂದು ಸಮುದಾಯ ಓಲೈಸಿದರೆ ಹೀಗಾಗುತ್ತದೆ. ಭಾರತೀಯರನ್ನು ಭಾರತೀಯರಂತೆ ನೋಡಿದರೆ ಇಂತಹ ಸಮಸ್ಯೆಗಳು ಬರವುದು ಇಲ್ಲ” ಎಂದು ನ್ಯಾಯಮೂರ್ತಿ ಎಂ.ಐ. ಅರುಣ್ ಅಭಿಪ್ರಾಯಪಟ್ಟರು.
“ಸನಾತನ ಧರ್ಮದ ಹೆಣ್ಣುಮಕ್ಕಳಿಗೆ ತಾಯಿ ಚಾಮುಂಡಿಗೆ ಪೂಜೆ ಮಾಡುವ ಹಕ್ಕಿದೆ. ಅದರಲ್ಲಿ ದಲಿತರು ಸಹ ಒಳಗೊಂಡಿದ್ದಾರೆ. ಆದರೆ ಅವರ ಹೇಳಿಕೆಯನ್ನು ತಿರುಚಿ ವಿವಾದ ಸೃಷ್ಟಿಸಲಾಗಿದೆ” ಎಂದು ಯತ್ನಾಳ್ ಪರ ವಕೀಲರು ವಾದ ಮಂಡಿಸಿದರು.
ವಿಜಯಪುರ ಶಾಸಕ ಯತ್ನಾಳ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ, “ಸನಾತನ ಧರ್ಮದವರೇ ತಾಯಿ ಚಾಮುಂಡಿಗೆ ಪೂಜೆ ಮಾಡಬೇಕು” ಎಂಬ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ದಲಿತ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತುಗಳು ಬಂದಿವೆ ಎಂದು ಕೊಪ್ಪಳದ ದಲಿತ ಸಂಘಟನೆ ದೂರು ನೀಡಿತ್ತು. ಇದರ ಆಧಾರದಲ್ಲಿ SC/ST ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
“ದಲಿತ ಹೆಣ್ಣುಮಕ್ಕಳ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿರುವುದು ನೋವುಂಟುಮಾಡಿದೆ. ಯತ್ನಾಳ್ ಅವರು ರಾಜ್ಯದ ಹಲವು ಕಡೆ ಕೋಮು ಸಂಘರ್ಷ ಹುಟ್ಟಿಸುವಂತೆ ಮಾತನಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು” ಎಂದು ದೂರುದಾರರು ಆಗ್ರಹಿಸಿದ್ದಾರೆ.