ಬೆಳಗಾವಿಯ ಕನ್ನಡಿಗ ಅರವಿಂದ್ ಮೆಳ್ಳಿಗೇರಿ (Arvind Melligeri) ನಿರ್ಮಿಸಿರುವ ಏಕಸ್ (Aequs) ಕಂಪನಿಯು ಇಂದು ಪಕ್ಕಾ ಮೇಕ್ ಇನ್ ಇಂಡಿಯಾ (Make in India) ಮಾದರಿಯಾಗಿದೆ. ಫೋನ್ ತಯಾರಿಕೆ, ಚಿಪ್ ತಯಾರಿಕೆ ಅಥವಾ ವಿಮಾನ ತಯಾರಿಕೆಗೆ ಹಲವು ಬಿಡಿಭಾಗಗಳು ಬೇಕಾಗುತ್ತವೆ. ಸಾಮಾನ್ಯವಾಗಿ ಇವುಗಳನ್ನು ವಿವಿಧ ದೇಶಗಳ ಕಂಪನಿಗಳಿಂದ ತರಿಸಿಕೊಳ್ಳಲಾಗುತ್ತದೆ. ಭಾರತದಲ್ಲಿಯೇ ಐಫೋನ್ ತಯಾರಾದರೂ ಅದರ ಬಿಡಿಭಾಗಗಳು ವಿದೇಶಗಳಿಂದ ಬರುತ್ತವೆ. ಆದರೆ ಏಕಸ್ ಕಂಪನಿಯು ಎಲ್ಲಾ ಬಿಡಿಭಾಗಗಳನ್ನು ಭಾರತದಲ್ಲಿಯೇ ತಯಾರಿಸುವ ಮೂಲಕ ವಿಭಿನ್ನ ಹೆಸರನ್ನು ಗಳಿಸಿದೆ.
ಏಕಸ್ ಸಂಸ್ಥೆ ವಿಮಾನದ ಡೋರ್, ಎಂಜಿನ್ ಸ್ಪಿನ್ನರ್ ಸೇರಿದಂತೆ ಅನೇಕ ಮುಖ್ಯ ಬಿಡಿಭಾಗಗಳನ್ನು ತಯಾರಿಸಿ, ಜಗತ್ತಿನ ಅಗ್ರಗಣ್ಯ ಸಂಸ್ಥೆಗಳಾದ ಏರ್ಬಸ್ ಮತ್ತು ಬೋಯಿಂಗ್‌ಗೆ ಸರಬರಾಜು ಮಾಡುತ್ತಿದೆ. 2007ರಲ್ಲಿ ಆರಂಭವಾದ ಈ ಕಂಪನಿ ಬೆಳಗಾವಿಯ 500 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಕಚ್ಚಾ ವಸ್ತುಗಳಿಂದ ಹಿಡಿದು ತಯಾರಾದ ಭಾಗಗಳವರೆಗೆ ಎಲ್ಲವನ್ನು ಇಲ್ಲಿ ತಯಾರಿಸಲು ಸೌಲಭ್ಯವಿದೆ. ಕ್ಷಿಪ್ರವಾಗಿ ಯಾವುದೇ ಬಿಡಿಭಾಗ ತಯಾರಿಸಲು ಈ ಸಂಸ್ಥೆಗೆ ಸಾಮರ್ಥ್ಯವಿದೆ.
ಹುಬ್ಬಳ್ಳಿಯ ಅರವಿಂದ್ ಮೆಳ್ಳಿಗೇರಿ ಈ ಸಂಸ್ಥೆಯ ಸಿಇಒ. ಇಲ್ಲಿ ಫೋರ್ಜಿಂಗ್, ಮೆಷಿನಿಂಗ್, ಸರ್ಫೇಸ್ ಟ್ರೀಟ್ಮೆಂಟ್, ಟೆಸ್ಟಿಂಗ್ ಮುಂತಾದ ಘಟಕಗಳಿದ್ದು, ಅಲೂಮಿನಿಯಂ ಬ್ಲಾಕ್ಗಳನ್ನು ವಿಮಾನದ ಭಾಗಗಳಾಗಿ ರೂಪಿಸುವ 10,000 ಟನ್ ಹೈಡ್ರಾಲಿಕ್ ಪ್ರೆಸ್ ಕೂಡ ಇದೆ.
ಏಕಸ್ ಸಂಸ್ಥೆ ಮಾನವ ಸಂಪನ್ಮೂಲಕ್ಕೂ ಹೆಚ್ಚಿನ ಆದ್ಯತೆ ನೀಡಿದೆ. ಸ್ಥಳೀಯ ಪ್ರದೇಶಗಳಿಂದ ಉದ್ಯೋಗಿಗಳನ್ನು ನೇಮಿಸಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡುತ್ತಿದೆ. ಜಾಗತಿಕವಾಗಿ ಕಾರ್ಮಿಕರ ಕೊರತೆ ಹೆಚ್ಚುತ್ತಿರುವ ಸಂದರ್ಭದಲ್ಲಿದು ಭಾರತಕ್ಕೆ ದೊಡ್ಡ ಅವಕಾಶವಾಗಿದೆ.
ಸ್ಥಳೀಯ ಕಾರ್ಮಿಕರು, ಸ್ಥಳೀಯ ವಸ್ತುಗಳು ಮತ್ತು ಸ್ಥಳೀಯ ತಯಾರಿಕೆಯನ್ನು ಅವಲಂಬಿಸಿರುವ ಏಕಸ್ ಸಂಸ್ಥೆ ನಿಜವಾದ ಅರ್ಥದಲ್ಲಿ ಮೇಕ್ ಇನ್ ಇಂಡಿಯಾಗೆ ಮಾದರಿಯಾಗಿದೆ.