New Delhi: ರಾಮೋಜಿ ಗ್ರೂಪ್ (Ramoji Group) ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಈನಾಡು ಪತ್ರಿಕೆಯ 50 ವರ್ಷಗಳ ಸುವರ್ಣ ಮಹೋತ್ಸವ ಹಾಗೂ ಈಟಿವಿ ಸಂಸ್ಥೆಯ 30 ವರ್ಷಗಳ ಸಂಭ್ರಮವನ್ನು ಪ್ರಧಾನಿಯೊಂದಿಗೆ ಹಂಚಿಕೊಂಡರು.
ಕಿರಣ್ ಅವರೊಂದಿಗೆ ಈಟಿವಿ ನೆಟ್ವರ್ಕ್ ಸಿಇಒ ಕೆ. ಬಾಪಿನೀಡು ಚೌಧರಿ ಇದ್ದರು. ಈ ಇಬ್ಬರೂ ಪ್ರಧಾನಿಯನ್ನು ಭೇಟಿಯಾಗಲು ಅವಕಾಶ ಸಿಕ್ಕಿದ ಖುಷಿಯನ್ನು ವ್ಯಕ್ತಪಡಿಸಿದರು. ಜೊತೆಗೆ ಈನಾಡು ಮತ್ತು ಈಟಿವಿ ಮೈಲಿಗಲ್ಲು ಸಂಭ್ರಮದ ಸ್ಮರಣಿಕೆಗಳನ್ನು ಮೋದಿ ಅವರಿಗೆ ನೀಡಿದರು.
ಕಿರಣ್ ಅವರು, “ಈ ಮಹತ್ವದ ಸಂದರ್ಭವನ್ನು ಪ್ರಧಾನಿಯೊಂದಿಗೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದು ನನಗೆ ಸಂತೋಷ. ಈ ಸಂದರ್ಭದಲ್ಲಿ ಅವರು ರಾಮೋಜಿ ರಾವ್ ಅವರ ನೆನಪುಗಳನ್ನು ಮೆಲುಕು ಹಾಕಿ ತಮ್ಮ ಅನುಭವಗಳನ್ನು ಹಂಚಿಕೊಂಡರು” ಎಂದು ಹೇಳಿದರು.
ಮೋದಿಯವರು ಈಟಿವಿ ಗುಜರಾತಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಅನ್ನದಾತ ಕಾರ್ಯಕ್ರಮವನ್ನು ನೆನಪಿಸಿಕೊಂಡು ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಿರಣ್, “ನಾವು ಈ ಕಾರ್ಯಕ್ರಮವನ್ನು ಇನ್ನೂ ತೆಲುಗು ಚಾನೆಲ್ನಲ್ಲಿ ಮುಂದುವರಿಸುತ್ತಿದ್ದೇವೆ” ಎಂದರು.
ಇತ್ತೀಚೆಗೆ ರಾಮೋಜಿ ಗ್ರೂಪ್ ಬಿಡುಗಡೆ ಮಾಡಿದ ಮಿಲೆಟ್ ಆಧಾರಿತ ಸಬಲ ಉತ್ಪನ್ನಗಳ ವಿಷಯದಲ್ಲೂ ಚರ್ಚೆ ನಡೆಯಿತು. ಕಿರಣ್ ಅವರು ಪ್ರಧಾನಿಯಿಂದ ಸಲಹೆ ಪಡೆದರು. ಮೋದಿ, ರೈತರನ್ನು ಪ್ರೋತ್ಸಾಹಿಸುವ ರಾಮೋಜಿ ಗ್ರೂಪ್ ಪ್ರಯತ್ನವನ್ನು ಶ್ಲಾಘಿಸಿ ಸಂಸ್ಥೆಗೆ ಶುಭಾಶಯ ಕೋರಿದರು.
1974ರಲ್ಲಿ ಆರಂಭವಾದ ಈನಾಡು ತೆಲುಗು ಪತ್ರಿಕೆ ಕಳೆದ ವರ್ಷ 50 ವರ್ಷಗಳನ್ನು ಪೂರೈಸಿದೆ. ಜವಾಬ್ದಾರಿಯುತ ಮಾಧ್ಯಮವಾಗಿ ಸಮಾಜ ನಿರ್ಮಾಣದಲ್ಲಿ ಈ ಪತ್ರಿಕೆ ಮಹತ್ವದ ಪಾತ್ರ ವಹಿಸಿದೆ. ಇದೇ ರೀತಿಯಾಗಿ 1995ರಲ್ಲಿ ಆರಂಭವಾದ ಈಟಿವಿ ವಾಹಿನಿ, 30 ವರ್ಷಗಳ ಪಯಣವನ್ನು ಪೂರೈಸಿ ತನ್ನದೇ ಆದ ಗುರುತನ್ನು ಮೂಡಿಸಿದೆ.