Belgaum: ಸಹಕಾರ ಸಚಿವರಾಗಿದ್ದ ಕೆ.ಎನ್. ರಾಜಣ್ಣರನ್ನು ಸಂಪುಟದಿಂದ ಕೈಬಿಟ್ಟ ಬಳಿಕ, ಮತ್ತೊಬ್ಬ ಕಾಂಗ್ರೆಸ್ ಹಿರಿಯ ಶಾಸಕನಿಗೆ ಹೈಕಮಾಂಡ್ ಶಾಕ್ ನೀಡಿದೆ. ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಅವರ ಬದಲಿಗೆ ಅರುಣ್ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅಂತಿಮ ಪಟ್ಟಿಯನ್ನು ರವಾನಿಸಿದ್ದಾರೆ.
ರಾಜು ಕಾಗೆ ಇತ್ತೀಚೆಗೆ, ತಮ್ಮ ಕ್ಷೇತ್ರಕ್ಕೆ 25 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆಯಾದರೂ ಎರಡು ವರ್ಷಗಳಿಂದ ಕಾಮಗಾರಿ ಆರಂಭವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಸಮಸ್ಯೆ ಬಗೆಹರಿಯದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೂಡ ಎಚ್ಚರಿಸಿದ್ದರು.
ರಾಜು ಕಾಗೆ ನೀಡಿದ ಈ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ ಉಂಟಾಯಿತು. ಜೂನ್ 23ರಂದು ಅವರು ಬಹಿರಂಗ ಹೇಳಿಕೆ ನೀಡಿದ್ದರಿಂದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರತ್ಯೇಕ ಸಭೆ ನಡೆಸಿ ಮನವೊಲಿಸಿ, ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಬಳಿಕ ಕಾಗೆ ಮೌನ ವಹಿಸಿದ್ದರು.
ರಾಜು ಕಾಗೆಯ ವಜಾದ ಮೂಲಕ, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗಂಭೀರ ಸಂದೇಶ ರವಾನಿಸಿದೆ.







