ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಕಲ್ಲುತೂರಾಟ ಪೂರ್ವಯೋಜಿತವಾಗಿತ್ತೆಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಈ ಘಟನೆಗೆ ಹೊಸ ತಿರುವು ಸಿಕ್ಕಂತಾಗಿದೆ. ಆರಂಭದಲ್ಲಿ 22 ಮಂದಿಯನ್ನು ಆರೋಪಿ ಎಂದು ಗುರುತಿಸಿದ್ದ ಪೊಲೀಸರು, ನಂತರ 29 ಮಂದಿಯನ್ನು ಬಂಧಿಸಿದ್ದರು. ಈಗ ಆರೋಪಿಗಳ ಸಂಖ್ಯೆ 32ಕ್ಕೆ ಏರಿದೆ.
ತನಿಖೆಯಲ್ಲಿ ಬಂಧಿತರು ಬಾಯಿ ಬಿಟ್ಟಿದ್ದು, ಸ್ವಾಮಿ ಎಂಬುವವರ ನೇತೃತ್ವದಲ್ಲಿ ಮೂರ್ತಿ ಕೂರಿಸಿದ್ದ ಗಣೇಶ ಮೆರವಣಿಗೆಯ ಮೇಲೆಯೇ ಕಲ್ಲು ತೂರಲು ಪೂರ್ವಯೋಜನೆ ನಡೆದಿತ್ತು ಎಂದು ಒಪ್ಪಿಕೊಂಡಿದ್ದಾರೆ. ಆದರೆ ತಪ್ಪಾಗಿ ಬೇರೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬುದು ಪತ್ತೆಯಾಗಿದೆ.
ಮದ್ದೂರಿನ ಕಲ್ಲುತೂರಾಟದ ಹಿಂದೆ ರಾಜಕೀಯ ದ್ವೇಷವೋ ಅಥವಾ ಧಾರ್ಮಿಕ ಕಾರಣವೋ ಎಂಬುದರ ಕುರಿತು ಪೊಲೀಸರು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 7ರಂದು ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಮಸೀದಿಯಿಂದ ಕಲ್ಲು ತೂರಾಟ ನಡೆದಿತ್ತು. ಇದರ ಪರಿಣಾಮ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟಾಯಿತು. ಮರುದಿನ ಹಿಂದೂ ಸಂಘಟನೆಗಳ ಮೆರವಣಿಗೆಯ ಸಂದರ್ಭದಲ್ಲಿ ಪೊಲೀಸರು ಲಾಠಿಚಾರ್ಜ್ ಕೂಡ ನಡೆಸಿದ್ದರು.
ಘಟನೆ ನಂತರ ಪ್ರತಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಬಿಜೆಪಿ ನಾಯಕರು ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದರೆ, ಎಂಎಲ್ಸಿ ಸಿಟಿ ರವಿ ಹಾಗೂ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಎಫ್ಐಆರ್ ದಾಖಲಾಗಿತ್ತು.
ಗೃಹ ಸಚಿವ ಪರಮೇಶ್ವರ್ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಕಲ್ಲುತೂರಾಟ ಪೂರ್ವಯೋಜಿತ ಎನ್ನುವ ಆರೋಪಗಳನ್ನೂ ತನಿಖೆಯಲ್ಲಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದರು. ಇದೀಗ ತನಿಖೆಯಲ್ಲಿ ಆ ಆರೋಪಗಳು ಸತ್ಯವೆಂಬುದು ದೃಢಪಟ್ಟಿದೆ.