Chennai: ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರಿಗೆ ಭಾನುವಾರ ಬಾಂಬ್ ಬೆದರಿಕೆ ಬಂದಿದೆ. ಶನಿವಾರ ಕರೂರಿನಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 40 ಜನರು ಸಾವನ್ನಪ್ಪಿದ್ದರು. ಈ ದುರ್ಘಟನೆಯ ಬೆನ್ನಲ್ಲೇ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ವಿಜಯ್ ಅವರ ಮನೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಕಾಲ್ತುಳಿತದಲ್ಲಿ 10 ಮಕ್ಕಳು, 17 ಮಹಿಳೆಯರು ಮತ್ತು 13 ಪುರುಷರು ಮೃತಪಟ್ಟಿದ್ದಾರೆ. ಈ ಘಟನೆ ನಂತರ ವಿಜಯ್ ದುಃಖ ವ್ಯಕ್ತಪಡಿಸಿ, ಮೃತರಿಗೆ ಗೌರವ ಸಲ್ಲಿಸಿದ್ದಾರೆ ಹಾಗೂ ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಆದರೆ, ಅವರು ಇನ್ನೂ ಆಸ್ಪತ್ರೆಗೆ ಅಥವಾ ಮೃತರ ಕುಟುಂಬಗಳನ್ನು ಭೇಟಿ ಮಾಡಿಲ್ಲ.
ಮೃತರ ಕುಟುಂಬಗಳಿಗೆ 20 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ. ನೆರವು ನೀಡುವುದಾಗಿ ವಿಜಯ್ ಘೋಷಿಸಿದ್ದಾರೆ. ಅಲ್ಲದೆ, ಈ ಘಟನೆಯ ಬಗ್ಗೆ ಸಿಬಿಐ ಅಥವಾ ಸ್ವತಂತ್ರ ತನಿಖೆ ನಡೆಸಬೇಕೆಂದು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.