Bengaluru: ಆಯುಧಪೂಜೆ, ವಿಜಯದಶಮಿ ಹಾಗೂ ವಾರಾಂತ್ಯದ ರಜೆ ಕಾರಣ ಸಾವಿರಾರು ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ದಸರಾ ಕಣ್ತುಂಬಿಕೊಳ್ಳಲು ಮೈಸೂರಿಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ವೇಳೆ KSRTC ಮತ್ತು ಖಾಸಗಿ ಬಸ್‌ಗಳು ಪ್ರಯಾಣಿಕರಿಗೆ ದರ ಏರಿಕೆ ಮೂಲಕ ಆಘಾತ ಕೊಟ್ಟಿವೆ.
ಬೆಂಗಳೂರು–ಮೈಸೂರು ಟಿಕೆಟ್ ದರ ಏರಿಕೆ: KSRTC ತಡೆರಹಿತ ಬಸ್ ಟಿಕೆಟ್ ದರ 210 ರೂಪಾಯಿಯಿಂದ 230 ರೂಪಾಯಿಗೆ ಏರಿದೆ. ಸಾಮಾನ್ಯ ಬಸ್ ದರ 161 ರೂಪಾಯಿಯಿಂದ 180 ರೂಪಾಯಿಗೆ ಹೆಚ್ಚಿಸಲಾಗಿದೆ. ದಸರಾ ಹಬ್ಬದ ಹಿನ್ನೆಲೆ 20 ರೂಪಾಯಿ ಏರಿಕೆ ಮಾಡಲಾಗಿದೆ.
ಖಾಸಗಿ ಬಸ್‌ಗಳ ಹೆಚ್ಚುವರಿ ದರ: ಖಾಸಗಿ ಬಸ್‌ಗಳೂ ಹಬ್ಬದ ನೆಪದಲ್ಲಿ ದರವನ್ನು ಗಗನಕ್ಕೇರಿಸಿವೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಮಾನ್ಯವಾಗಿ 1000 ರೂಪಾಯಿ ಇದ್ದ ದರ ಈಗ 2039 ರೂಪಾಯಿಯಾಗಿದೆ. ದಾವಣಗೆರೆಗೆ 750 ರೂಪಾಯಿ ಇತ್ತು, ಈಗ 1489 ರೂಪಾಯಿ. ಬೆಳಗಾವಿಗೆ 1200 ರೂಪಾಯಿ ಇತ್ತು, ಈಗ 2677 ರೂಪಾಯಿಯಾಗಿದೆ. ಮಂಗಳೂರಿಗೆ 1200 ರೂಪಾಯಿ ದರ 1800 ರೂಪಾಯಿಗೆ ಏರಿದೆ. ಕಲಬುರಗಿಗೆ 1100 ರೂಪಾಯಿ ಇತ್ತು, ಈಗ 2299 ರೂಪಾಯಿಯಾಗಿದೆ.
ಬಸ್ ದರ ಏರಿಕೆಗೆ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಸರ್ಕಾರದ ವಿರುದ್ಧ ಧ್ವನಿ ಎತ್ತಿ, ದರ ಏರಿಕೆಗೆ ಧರ್ಮದ ಬಣ್ಣ ಹಚ್ಚಿದ್ದಾರೆ.
ಒಟ್ಟಿನಲ್ಲಿ, ಹಬ್ಬದ ಸಂಭ್ರಮದಲ್ಲಿ ಪ್ರಯಾಣಿಕರಿಗೆ ಬಸ್ ಟಿಕೆಟ್ ದರ ಏರಿಕೆ ದೊಡ್ಡ ಶಾಕ್ ನೀಡಿದೆ.