
New Delhi: ಗಾಜಾ ಸಂಘರ್ಷ (Gaza conflict) ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೂಪಿಸಿದ ಸಮಗ್ರ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂಘರ್ಷ ನಿಲ್ಲಿಸಿ ಶಾಂತಿ ತರಲು ಟ್ರಂಪ್ ಕೈಗೊಂಡಿರುವ ಈ ಪ್ರಯತ್ನಕ್ಕೆ ಸಂಬಂಧಪಟ್ಟ ಎಲ್ಲರೂ ಒಗ್ಗೂಡುತ್ತಾರೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಇಸ್ರೇಲ್–ಹಮಾಸ್ ನಡುವೆ ನಡೆಯುತ್ತಿರುವ ಯುದ್ಧ ಅಂತ್ಯ ಹಂತದಲ್ಲಿರುವಾಗ ಟ್ರಂಪ್ ಗಾಜಾ ಶಾಂತಿ ಯೋಜನೆಯನ್ನು ಶ್ವೇತಭವನ ಪ್ರಕಟಿಸಿತು. ತಕ್ಷಣವೇ ಪ್ರಧಾನಿ ಮೋದಿ ತಮ್ಮ ಟ್ವೀಟ್ ಮೂಲಕ ಇದನ್ನು ಸ್ವಾಗತಿಸಿದರು. ಅವರು, ಈ ಯೋಜನೆ ಗಾಜಾ ಪ್ರದೇಶಕ್ಕೂ, ಇಸ್ರೇಲ್ ಮತ್ತು ಪ್ಯಾಲೇಸ್ಟೇನ್ ಜನರಿಗೂ, ಜೊತೆಗೆ ಸಂಪೂರ್ಣ ಪಶ್ಚಿಮ ಏಷ್ಯಾ ಪ್ರದೇಶಕ್ಕೂ ದೀರ್ಘಕಾಲದ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿ ತರುವ ದಾರಿ ಎನಿಸುತ್ತದೆ ಎಂದು ಹೇಳಿದರು.
ಮೋದಿ ಹೊರತುಪಡಿಸಿ ಕತಾರ್, ಜೋರ್ಡಾನ್, ಯುಎಇ, ಇಂಡೋನೇಷ್ಯಾ, ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಸೇರಿದಂತೆ ಹಲವಾರು ದೇಶಗಳೂ ಟ್ರಂಪ್ ಅವರ ಯೋಜನೆಯನ್ನು ಸ್ವಾಗತಿಸಿವೆ.
ಟ್ರಂಪ್ ರೂಪಿಸಿರುವ 20 ಅಂಶಗಳ ಗಾಜಾ ಯೋಜನೆಯ ಪ್ರಕಾರ, ಎಲ್ಲಾ ಒತ್ತೆಯಾಳುಗಳನ್ನು 72 ಗಂಟೆಗಳೊಳಗೆ ಬಿಡುಗಡೆ ಮಾಡಲಾಗುವುದು. ಗಾಜಾದಲ್ಲಿ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಲಾಗುವುದು. ಇಸ್ರೇಲ್ ಗಾಜಾವನ್ನು ನಿಯಂತ್ರಿಸುವುದಿಲ್ಲ ಎಂದು ಯೋಜನೆ ಹೇಳುತ್ತದೆ. ಈ ಶಾಂತಿ ಮಂಡಳಿಗೆ ಸ್ವತಃ ಟ್ರಂಪ್ ಅಧ್ಯಕ್ಷರಾಗಲಿದ್ದಾರೆ. ಇಸ್ರೇಲ್ ಇದಕ್ಕೆ ಒಪ್ಪಿಕೊಂಡಿದ್ದು, ಹಮಾಸ್ ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಹಮಾಸ್ ಒಪ್ಪದಿದ್ದರೆ, ಹಮಾಸ್ ವಿರುದ್ಧದ ಹೋರಾಟದಲ್ಲಿ ಅಮೆರಿಕ ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ನೀಡಲಿದೆ.