Koppal: ದೇವಿಕ್ಯಾಂಪ್ ನಿಂದ ಗಂಗಾವತಿಗೆ ಬೈಕ್‌ನಲ್ಲಿ ಬರುತ್ತಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ (31) ಅವರ ಮೇಲೆ ದುಷ್ಕರ್ಮಿಗಳು ಭೀಕರ ಹತ್ಯೆ ಎಸಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ವೆಂಕಟೇಶ್ ತಮ್ಮ ಸ್ನೇಹಿತರೊಂದಿಗೆ ಊಟ ಮಾಡಿ ದೇವಿಕ್ಯಾಂಪ್ ನಿಂದ ಗಂಗಾವತಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಹಿಂಬಾಲಿಸಿ, ಅವರ ಬೈಕ್‌ಗೆ ಗುದ್ದಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅವರನ್ನು ಸ್ಥಳದಲ್ಲೇ ಹತ್ಯೆಗೈದಿದ್ದಾರೆ. ಘಟನೆ ಗಂಗಾವತಿ–ಕೊಪ್ಪಳ ರಸ್ತೆಯ ಲೀಲಾವತಿ ಎಲುಬು ಕೀಲು ಆಸ್ಪತ್ರೆ ಎದುರು ನಡೆದಿದೆ.
ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಆರ್ಎಸ್ ಕಾಲೋನಿಯಲ್ಲಿ ದುಷ್ಕರ್ಮಿಗಳು ಬಳಸಿದ ಟಾಟಾ ಇಂಡಿಕಾ ಕಾರು ಪತ್ತೆಯಾಗಿದೆ.
ವೆಂಕಟೇಶ್ ಹತ್ಯೆಯ ಹಿಂದೆ ಹಳೆಯ ದ್ವೇಷ ಕಾರಣ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ವೆಂಕಟೇಶ್ ಅವರ ಸ್ನೇಹಿತರು ರವಿ ಎಂಬಾತನ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಎರಡು ಮಂದಿಗೂ ಕಳೆದ 7–8 ವರ್ಷಗಳಿಂದ ವೈಷಮ್ಯವಿದ್ದು, ನಾಯಕತ್ವ ಹಾಗೂ ಏರಿಯಾ ಕಂಟ್ರೋಲ್ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು.
ಈ ಹಿನ್ನೆಲೆಯಲ್ಲೇ ರವಿ ಈ ಕೊಲೆಯನ್ನು ಎಸಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿದೆ.







