Cairo: ಎರಡು ವರ್ಷಗಳಿಂದ ನಡೆಯುತ್ತಿದ್ದ ಇಸ್ರೇಲ್ ಮತ್ತು ಹಮಾಸ್ (Israel-Hamas) ನಡುವಿನ ಯುದ್ಧ ಕೊನೆಗಾಣಲಿದೆ. ಸಾವಿರಾರು ಜನರನ್ನು ಬಲಿ ತೆಗೆದುಕೊಂಡು, ಪ್ಯಾಲೆಸ್ಟೀನ್ ಪ್ರದೇಶವನ್ನು ನಾಶಗೊಳಿಸಿದ್ದ ಗಾಜಾ ಯುದ್ಧಕ್ಕೆ ವಿರಾಮ ನೀಡಲು ಎರಡೂ ಪಕ್ಷಗಳು ಗುರುವಾರ ಒಪ್ಪಿಕೊಂಡಿವೆ.
ಈ ಶಾಂತಿ ಒಪ್ಪಂದದಲ್ಲಿ ಒತ್ತೆಯಾಳುಗಳು ಮತ್ತು ಕೈದಿಗಳ ಬಿಡುಗಡೆ ಪ್ರಮುಖ ಅಂಶವಾಗಿದೆ. 2023ರ ಅಕ್ಟೋಬರ್‌ನಲ್ಲಿ ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ್ದರಿಂದ ಆರಂಭವಾದ ಈ ಸಂಘರ್ಷದಲ್ಲಿ ಅನೇಕರು ಬಲಿಯಾದರು, ಅನೇಕರು ವಲಸೆ ಹೋಗಬೇಕಾಯಿತು.
ಹಮಾಸ್ ತನ್ನ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದ್ದು, ಇಸ್ರೇಲ್ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಈಜಿಪ್ಟ್‌ನಲ್ಲಿ ಅವರು ಪರಿಚಯಿಸಿದ 20 ಅಂಶಗಳ ಶಾಂತಿ ಯೋಜನೆಯ ಭಾಗವಾಗಿ ಈ ಒಪ್ಪಂದ ಮೂಡಿ ಬಂದಿದೆ.
ಕತಾರ್ ಸರ್ಕಾರ ಹೇಳುವ ಪ್ರಕಾರ, ಇದು ಗಾಜಾ ವಿರಾಮದ ಮೊದಲ ಹಂತವಾಗಿದ್ದು, ಮಾನವೀಯ ಸಹಾಯ, ಒತ್ತೆಯಾಳುಗಳ ಬಿಡುಗಡೆ ಮತ್ತು ಶಾಂತಿ ಪ್ರಕ್ರಿಯೆಗೆ ಇದು ಸಹಕಾರಿ ಆಗಲಿದೆ.
ಹಮಾಸ್ ಮೂಲಗಳ ಪ್ರಕಾರ, ಈ ಒಪ್ಪಂದದ ಮೊದಲ ಹಂತದಲ್ಲಿ ಸುಮಾರು 2,000 ಪ್ಯಾಲೆಸ್ಟೀನಿಯನ್ ಕೈದಿಗಳನ್ನು 20 ಇಸ್ರೇಲಿ ಒತ್ತೆಯಾಳುಗಳೊಂದಿಗೆ ವಿನಿಮಯ ಮಾಡಲಾಗುವುದು. ಒಪ್ಪಂದ ಜಾರಿಗೆ ಬಂದ 72 ಗಂಟೆಗಳೊಳಗೆ ಈ ವಿನಿಮಯ ನಡೆಯಲಿದೆ.







