Dharwad: ಹುಬ್ಬಳ್ಳಿಯ ವಿಶಾಲ ನಗರದಲ್ಲಿ ಅಕ್ಟೋಬರ್ 5 ರಂದು ನಡೆದಿದ್ದ ಒಂದು ಕಾರ್ಯಕ್ರಮದಲ್ಲಿ ಮೌಲ್ವಿಯೊಬ್ಬರು ಕುರಾನ್ ಪಠಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಕುರಾನ್ ಪಠಣ ಏಕೆ ಎನ್ನುವ ಪ್ರಶ್ನೆಯನ್ನು ಬಿಜೆಪಿ ಎತ್ತಿತ್ತು. ಆದರೆ ಕಾಂಗ್ರೆಸ್ ಪಕ್ಷದವರು, ಅದು ಸರ್ಕಾರಿ ಕಾರ್ಯಕ್ರಮ ಅಲ್ಲ, ಖಾಸಗಿ ಕಾರ್ಯಕ್ರಮ ಎಂದು ಸ್ಪಷ್ಟನೆ ನೀಡಿದ್ದರು.
ಆದರೂ ಬಿಜೆಪಿ ತನ್ನ ವಾದದಿಂದ ಹಿಂದೆ ಸರಿಯದೇ, ಧಾರವಾಡದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಕುರಾನ್ ಪಠಣ ನಡೆದಿರುವ ಸ್ಥಳವನ್ನು “ಶುದ್ಧಗೊಳಿಸಲು” ಅಂದರೆ ಹೋಮ ಮಾಡುವುದಾಗಿ ಬಿಜೆಪಿ ಘೋಷಿಸಿದೆ. ಬೆಳಿಗ್ಗೆ 11 ಗಂಟೆಗೆ ಹೋಮ ನಡೆಯಲಿದ್ದು, ಇದರ ನೇತೃತ್ವವನ್ನು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ವಹಿಸಿದ್ದಾರೆ.
ಬೆಲ್ಲದ್ ಅವರು, ಕುರಾನ್ ಪಠಣ ವಿಚಾರವಾಗಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅವರ ಪ್ರಕಾರ, ಹೆಸ್ಕಾಂ ಕಾಮಗಾರಿ ಗುದ್ದಲಿ ಪೂಜೆಯ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಕುರಾನ್ ಪಠಣ ಮಾಡಲಾಗಿದೆ.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮುಖಂಡರು ಹೇಳಿರುವಂತೆ, ಗುದ್ದಲಿ ಪೂಜೆ ಮಾತ್ರ ಸರ್ಕಾರಿ ಕಾರ್ಯಕ್ರಮವಾಗಿತ್ತು. ಅಭಿನಂದನಾ ಸಮಾರಂಭ ಖಾಸಗಿ ಕಾರ್ಯಕ್ರಮವಾಗಿದ್ದು, ಅದನ್ನು ಪಾಲಿಕೆ ಸದಸ್ಯೆ ಮಂಗಳಾ ಗೌರಿ ಮತ್ತು ಅವರ ಪುತ್ರ ನಾಗರಾಜ್ ಗೌರಿ ಆಯೋಜಿಸಿದ್ದರು.
ಈ ಘಟನೆ ಈಗ ರಾಜಕೀಯ ಬಣ್ಣ ಪಡೆದಿದ್ದು, ಬಿಜೆಪಿ ನಡೆಸಲಿರುವ ಹೋರಾಟದಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.