ಭಾರತೀಯ Telecom ದಿಗ್ಗಜ ಏರ್‌ಟೆಲ್ (Bharti Airtel), ಇದೇ August ತಿಂಗಳ ಅಂತ್ಯದೊಳಗೆ ದೇಶದಲ್ಲಿ ತನ್ನ 5G ಸೇವೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿರುವ Airtel, “ಏರ್‌ಟೆಲ್ ಆಗಸ್ಟ್ ನಲ್ಲಿ 5G ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ನಮ್ಮ ನೆಟ್‌ವರ್ಕ್ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ನಮ್ಮ ಗ್ರಾಹಕರಿಗೆ 5G ಸಂಪರ್ಕದ ಸಂಪೂರ್ಣ ಪ್ರಯೋಜನಗಳನ್ನು ತಲುಪಿಸಲು Airtel ಪ್ರಪಂಚದಾದ್ಯಂತದ ಅತ್ಯುತ್ತಮ ತಂತ್ರಜ್ಞಾನ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ” ಎಂದು ತಿಳಿಸಿದೆ.
ಈ ಮೊದಲು 5G ತರಂಗಗಳ ಹರಾಜು ಪ್ರಕ್ರಿಯೆಯಲ್ಲಿ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ದೇಶದಲ್ಲಿ ಅಕ್ಟೋಬರ್ ವೇಳೆಗೆ 5ಜಿ ಜಾರಿಗೆ ತರುವುದಾಗಿ ತಿಳಿಸಿದ್ದರು.
ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ತರಂಗಗುಚ್ಛಗಳನ್ನು ಖರೀದಿಸಿದ Reliance Jio ನ ಅಧ್ಯಕ್ಷ ಆಕಾಶ್ ಅಂಬಾನಿ ಆಗಸ್ಟ್ 15 ರಂದು ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಜಿಯೋ 5G ಸೇವೆಗಳನ್ನು ಘೋಷಿಸುವ ಸುಳಿವು ನೀಡಿದ್ದಾರೆ.
ಹರಾಜು ಪ್ರಕ್ರಿಯೆಯಲ್ಲಿ ತರಂಗಗಳನ್ನು ಖರೀದಿಸಿದ್ದ Vodafone Idea ದಿಂದ 5G ಸೇವೆಯ ಅನಾವರಣದ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಈ ಮೂರು ಪ್ರಮುಖ ಟೆಲಿಕಾಂ ಆಪರೇಟರ್ ಗಳು ಮುಂದಿನ ದಿನಗಳಲ್ಲಿ 5G ನೆಟ್‌ವರ್ಕ್ ಸೇವೆಯನ್ನು ದೇಶದಲ್ಲಿ ಒದಗಿಸುವ ಪ್ರಮುಖ ಕಂಪನಿಗಳಾಗಿವೆ.