
IPL ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ (Rohit Sharma) ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಅವರು ದಿನೇಶ್ ಕಾರ್ತಿಕ್ ದಾಖಲೆಯನ್ನು ಸರಿಗಟ್ಟಿದ್ದು, ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭಾನುವಾರ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟ್ ಮಾಡಿತು. ಆರಂಭಿಕನಾಗಿ ಬಂದ ರೋಹಿತ್ 4 ಎಸೆತಗಳನ್ನು ಎದುರಿಸಿದರೂ ರನ್ ಖಾತೆ ತೆರೆಯಲಾಗಲಿಲ್ಲ. ಇದರಿಂದಾಗಿ, ಐಪಿಎಲ್‌ನಲ್ಲಿ 18ನೇ ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಗೆ ಸೇರಿದರು.
ಅತ್ಯಧಿಕ ಸೊನ್ನೆ ದಾಖಲಿಸಿದ ಆಟಗಾರರು
- 18 ಬಾರಿ: ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್ವೆಲ್
- 16 ಬಾರಿ: ಪಿಯೂಷ್ ಚಾವ್ಲಾ, ಸುನಿಲ್ ನರೈನ್
- 15 ಬಾರಿ: ರಶೀದ್ ಖಾನ್, ಮಂದೀಪ್ ಸಿಂಗ್
ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ 2ನೇ ಸ್ಥಾನಕ್ಕೇರಿದ್ದಾರೆ. ಅವರು 258 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ ದಿನೇಶ್ ಕಾರ್ತಿಕ್ (257 ಪಂದ್ಯ)ರನ್ನು ಹಿಂದಿಕ್ಕಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆದರೆ ಕಳೆದ ವರ್ಷ ಮುಂಬೈ ಫ್ರಾಂಚೈಸಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಕ ಮಾಡಿತು. ಇದರೊಂದಿಗೆ ಮುಂಬೈ ತಂಡದ ಪ್ರದರ್ಶನ ನಿರೀಕ್ಷೆಗೂ ಮೀರಿ ಕುಸಿತ ಕಂಡು ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.