Bengaluru: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವಾಸಾರ್ಹ ಸಮಾಜ ವಿಜ್ಞಾನ ಸಂಸ್ಥೆ ಲೋಕನೀತಿ, CSDS ಸಮೀಕ್ಷೆ ನಡೆಸಿ ವರದಿ ತಯಾರಿಸಿದೆ. ಈ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗಿದೆ. ಸಮೀಕ್ಷೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅನೇಕ ಆಸಕ್ತಿಕರ ಅಂಶಗಳು ತಿಳಿದುಬಂದಿವೆ. ಉದಾಹರಣೆಗೆ, ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಹೇಗೆ ತಲುಪಿತು, ಹೆಚ್ಚು ಫಲಾನುಭವಿಗಳಿರುವ ಜಿಲ್ಲೆಗಳು ಯಾವುವು, ಶಕ್ತಿ ಯೋಜನೆಯಿಂದ ಉದ್ಯೋಗಾವಕಾಶ ಹೆಚ್ಚಿದೆಯೇ, ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರಭಾವ ಇರುವ ಜಿಲ್ಲೆಗಳಲ್ಲಿ ಫಲಾನುಭವಿಗಳ ಪ್ರಮಾಣ ಹೇಗಿದೆ ಎಂಬುದರ ಕುರಿತು ವಿವರ ನೀಡಲಾಗಿದೆ.
ಅನ್ನಭಾಗ್ಯ ಯೋಜನೆ ಅತಿ ಹೆಚ್ಚು ಜನರಿಗೂ ತಲುಪಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ 5 ಕೆಜಿ ಉಚಿತ ಅಕ್ಕಿ ನೀಡಲಾಗಿದೆ. ಶೇ 94 ಕುಟುಂಬಗಳು ಪ್ರಯೋಜನ ಪಡೆದಿದ್ದು, ಕಲಬುರಗಿ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಉತ್ತಮವಾಗಿ ಕಾರ್ಯಗತವಾಗಿದೆ. ಈ ಯೋಜನೆಯಿಂದ ಶೇ 64 ಜನರು ಆರ್ಥಿಕವಾಗಿ ಸುಧಾರಣೆ ಕಂಡು, ಶೇ 93 ರಷ್ಟು ಮಹಿಳೆಯರು ಕುಟುಂಬ ಸಂಬಂಧಗಳಲ್ಲಿ ಉತ್ತಮ ಬದಲಾವಣೆ ಕಂಡಿದ್ದಾರೆ.
ಯುವ ನಿಧಿ ಯೋಜನೆಯ ವ್ಯಾಪ್ತಿ ತಗ್ಗಿದ್ದು, ಕೇವಲ ಶೇ 7 ಜನರಿಗೆ ಮಾತ್ರ ಪ್ರಯೋಜನವಾಗಿದೆ. ಪ್ರಯೋಜನ ಪಡೆದವರಲ್ಲಿ ಶೇ 51 ರಷ್ಟು ಮಂದಿ ತಮ್ಮ ಕೌಶಲ್ಯ ಅಭಿವೃದ್ಧಿಗಾಗಿ ತರಬೇತಿ ಕೇಂದ್ರಗಳಲ್ಲಿ ಸೇರಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಶೇ 78 ಮಹಿಳೆಯರು ಪ್ರಯೋಜನ ಪಡೆದಿದ್ದು, ಅವರಲ್ಲಿ ಶೇ 94 ಹಣವನ್ನು ಆಹಾರಕ್ಕೆ, ಶೇ 89 ವೈದ್ಯಕೀಯ ವೆಚ್ಚಗಳಿಗೆ ಮತ್ತು ಶೇ 52 ಮಕ್ಕಳ ಶಿಕ್ಷಣಕ್ಕಾಗಿ ಬಳಸಿದ್ದಾರೆ. ಶೇ 88 ಮಹಿಳೆಯರು ಕುಟುಂಬ ನಿರ್ಧಾರಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದಾರೆ.
ಗೃಹಜ್ಯೋತಿ ಯೋಜನೆ ಶೇ 82 ಮನೆಗಳಿಗೆ ತಲುಪಿದ್ದು, ಶೇ 74 ಜನರು ತಿಂಗಳಿಗೆ 500 ರೂ.ವರೆಗೆ ಉಳಿತಾಯ ಮಾಡುತ್ತಿದ್ದಾರೆ. ವಿದ್ಯುತ್ ಉಪಕರಣ ಬಳಕೆ ಶೇ 43 ಮನೆಗಳಲ್ಲಿ ಹೆಚ್ಚಾಗಿದೆ ಮತ್ತು ಶೇ 89 ಮಹಿಳೆಯರು ಕುಟುಂಬ ಸಂಬಂಧಗಳಲ್ಲಿ ಸುಧಾರಣೆ ಕಂಡಿದ್ದಾರೆ. ಶಕ್ತಿ ಯೋಜನೆಯಿಂದ ಶೇ 96 ಮಹಿಳೆಯರು ಪ್ರಯೋಜನ ಪಡೆದು ಶೇ 46 ಮಂದಿ ವಾರಕ್ಕೆ 250 ರೂ.ವರೆಗೆ ಉಳಿಸಿಕೊಳ್ಳುತ್ತಿದ್ದಾರೆ. ಶೇ 72 ಮಂದಿ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದು, ಶೇ 61 ಮನೆಯ ಹೊರ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸಮೀಕ್ಷೆಯಿಂದ ಗೊತ್ತಾಗಿದೆ, ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ಪತ್ರಿಕೆ, ಟಿವಿ ಜಾಹೀರಾತುಗಳು, ಸ್ನೇಹಿತರು ಮತ್ತು ಸಾಮಾಜಿಕ ಮಾಧ್ಯಮದಿಂದ ತಲುಪಿದೆ. ಗ್ರಾಮೀಣ ಭಾಗಗಳಲ್ಲಿ ನೆರೆಯವರು, ಸ್ನೇಹಿತರು ಪ್ರಮುಖ ಮಾಹಿತಿ ಮೂಲವಾಗಿದ್ದರೆ, ನಗರಗಳಲ್ಲಿ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳು ಹೆಚ್ಚು ಪರಿಣಾಮಕಾರಿಯಾಗಿವೆ.
ಫಲಾನುಭವಿಗಳ ಪ್ರಾಬಲ್ಯವು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚು ಕಂಡುಬಂದಿದೆ. ಅನ್ನಭಾಗ್ಯ ಯೋಜನೆ ಕಲಬುರಗಿ, ಹಾಸನ, ತುಮಕೂರು, ರಾಯಚೂರು; ಗೃಹಲಕ್ಷ್ಮಿ ಹಾಸನ, ಮಂಡ್ಯ, ಚಿಕ್ಕಮಗಳೂರು, ಬೆಳಗಾವಿ; ಗೃಹಜ್ಯೋತಿ ದಕ್ಷಿಣ ಕನ್ನಡ, ಕಲಬುರಗಿ, ಬೆಳಗಾವಿ, ತುಮಕೂರು; ಯುವ ನಿಧಿ ಬೆಂಗಳೂರು, ಧಾರವಾಡ, ಮೈಸೂರು; ಶಕ್ತಿ ಯೋಜನೆ ಬೆಳಗಾವಿ, ದಾವಣಗೆರೆ, ಮೈಸೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಯೋಜನ ಪಡೆದಿದೆ.
ಉಚಿತ ಯೋಜನೆಗಳಲ್ಲಿ ಮಹಿಳೆಯರು ಪ್ರಮುಖ ಪ್ರಯೋಜನ ಪಡೆದಿದ್ದಾರೆ. ಶೇ 70–75 ಮಹಿಳೆಯರು ಮತ್ತು ಶೇ 25–30 ಪುರುಷರು ಪ್ರಯೋಜನ ಪಡೆದಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಾಗೃತಿ ಉಚ್ಚ ಮಟ್ಟದಲ್ಲಿದ್ದು, ಶೇ 55–60 ಮಾತ್ರ ನಿಯಮಿತವಾಗಿ ಪ್ರಯೋಜನ ಪಡೆದುಕೊಂಡಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚು ಪ್ರಯೋಜನ ಪಡೆದುಕೊಂಡಿದ್ದಾರೆ. ಗೃಹಜ್ಯೋತಿ ಯೋಜನೆಯಿಂದ ಮಾಸಿಕ 300–500 ರೂ. ಉಳಿತಾಯವಾಗಿದ್ದು, ನಗರ ಪ್ರದೇಶಗಳಲ್ಲಿ ಹೆಚ್ಚು ಪ್ರಯೋಜನ ದೊರೆಯುತ್ತಿದೆ. ಹೆಚ್ಚಿನ ದುಡಿಯುವ ವರ್ಗದ ಮಹಿಳೆಯರು ಅರ್ಜಿ ಸಲ್ಲಿಸದಿರುವುದರಿಂದ ಗೃಹಲಕ್ಷ್ಮಿ ಯೋಜನೆಯಿಂದ ಶೇ 62–25 ಮಹಿಳೆಯರು ಮಾತ್ರ ಪ್ರಯೋಜನ ಪಡೆದುಕೊಂಡಿದ್ದಾರೆ.