Abu Dhabi: Artificial Intelligence (AI) ಕುರಿತಂತೆ ಜಗತ್ತಿನಾದ್ಯಂತ ಚರ್ಚೆಗಳು ನಡೆಯುತ್ತಿವೆ. ಕೆಲಸ ಕಳೆದುಕೊಳ್ಳುವ ಭೀತಿ, ಪರ ವಿರೋಧ ಅಭಿಪ್ರಾಯಗಳು ಎದುರಾಗುತ್ತಿದ್ದರೂ, ಅಬುಧಾಬಿ ಮಹತ್ವದ ನಿರ್ಧಾರ ಕೈಗೊಂಡಿದೆ. 2027ರ ವೇಳೆಗೆ ಸಂಪೂರ್ಣ ಎಐ ಚಾಲಿತ ಸರ್ಕಾರವಾಗಲಿದೆ ಎಂದು ಘೋಷಿಸಿದೆ. ಈ ಯೋಜನೆಗೆ ಅನುಗುಣವಾಗಿ 2025-27ರ ರೋಡ್‌ಮ್ಯಾಪ್ ಅನ್ನು ಬಹಿರಂಗಪಡಿಸಲಾಗಿದೆ.
ಅಬುಧಾಬಿ ಸರ್ಕಾರ 2025-27 ಡಿಜಿಟಲ್ ಸ್ಟ್ರಾಟರ್ಜಿಯನ್ನು ಅನಾವರಣಗೊಳಿಸಿದ್ದು, ಇದಕ್ಕಾಗಿ AED 13 ಬಿಲಿಯನ್ ಹಣವನ್ನು ಮೀಸಲಿಡಲಾಗಿದೆ. ಇದು ಸರ್ಕಾರದ ದಕ್ಷತೆಯನ್ನು ಹೆಚ್ಚಿಸುವ ಪ್ಲಾನ್ ಮಾತ್ರವಲ್ಲ, ಭವಿಷ್ಯದ ಸ್ಮಾರ್ಟ್ ಆಡಳಿತಕ್ಕಾಗಿ ಪ್ರಮುಖ ಹೆಜ್ಜೆಯಾಗಿದೆ. ಜಗತ್ತು ಎಐ ಚಾಲಿತ ಆಡಳಿತದತ್ತ ಸಾಗುವಾಗ, ಅಬುಧಾಬಿ ಅದರಲ್ಲಿ ಮುಂಚೂಣಿಯಲ್ಲಿದೆ.
2025-27 ಡಿಜಿಟಲ್ ಸ್ಟ್ರಾಟರ್ಜಿಯ ಮುಖ್ಯ ಅಂಶಗಳು
- ಸರ್ಕಾರಿ ಪ್ರಕ್ರಿಯೆಗಳಲ್ಲಿ ಶೇಕಡಾ 100 ರಷ್ಟು ಆಟೋಮೇಶನ್.
- 2,000ಕ್ಕೂ ಹೆಚ್ಚು ಡಿಜಿಟಲ್ ಸೇವೆಗಳು ಎಐ ಮೂಲಕ ಕಾರ್ಯನಿರ್ವಹಣೆ.
- ಎಲ್ಲಾ ಕ್ಷೇತ್ರಗಳಲ್ಲಿ 200ಕ್ಕೂ ಹೆಚ್ಚು ಎಐ ಸೊಲ್ಯೂಷನ್.
- AED 24 ಬಿಲಿಯನ್ ಮೊತ್ತವನ್ನು ಜಿಡಿಪಿಗೆ ಕೊಡುಗೆ.
- 2027ರ ವೇಳೆಗೆ 5,000+ ಹೊಸ ಉದ್ಯೋಗ ಸೃಷ್ಟಿ.
- ಶೇಕಡಾ 80 ರಷ್ಟು ಸೇವೆಗಳು ತ್ವರಿತ ಹಾಗೂ ನಿಖರತೆಯೊಂದಿಗೆ ಲಭ್ಯ.
ಅಬುಧಾಬಿ ಈಗಾಗಲೇ ಮೂಲಭೂತ ಸೌಕರ್ಯ ಒದಗಿಸುವ ಕಾರ್ಯವನ್ನು ಪ್ರಾರಂಭಿಸಿದೆ. ಆಡಳಿತ, ನಿರ್ವಹಣೆ, ಕಾರ್ಯಾಚರಣೆ ಎಲ್ಲವನ್ನೂ ಎಐ ವ್ಯಾಪ್ತಿಗೆ ತರುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ವ್ಯವಸ್ಥೆಯಿಂದ ಸರ್ಕಾರದ ಯೋಜನೆಗಳು ಸ್ಪಷ್ಟವಾಗಿ ಜಾರಿಯಾಗಲಿದ್ದು, ಕಾರ್ಯರೂಪಕ್ಕೆ ತರುವ ವೇಗ ಹೆಚ್ಚಳವಾಗಲಿದೆ.
ಎಐ ಚಾಲಿತ ಆಡಳಿತದಿಂದ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ಮತ್ತು ಶೀಘ್ರ ಪರಿಹಾರ ಲಭ್ಯವಾಗಲಿದೆ. ಕಡತ ಹಿಡಿದು ಬರೆಯುವ ಪರಿಸ್ಥಿತಿ ಇಲ್ಲ. ಎಲ್ಲಾ ಸೇವೆಗಳು ಪಾರದರ್ಶಕವಾಗಿ ದೊರಕಲಿದ್ದು, ಇದು ದಕ್ಷ ಹಾಗೂ ಅಭಿವೃದ್ಧಿ ಆಡಳಿತಕ್ಕೆ ಪೂರಕವಾಗಲಿದೆ.