
Bengaluru: ಸುದ್ದಗುಂಟೆಪಾಳ್ಯದಲ್ಲಿ (Suddaguntepalya) ನಡೆದ ಯುವತಿಗೆ ಕಿರುಕುಳ ಪ್ರಕರಣದಲ್ಲಿ, 10 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಕಾನೂನಿನ ಬಲೆಗೆ ಬಿದ್ದಿದ್ದಾನೆ. ಕೇರಳದ (Kerala) ಕೋಝಿಕ್ಕೋಡ್ ಬಳಿ ಇರುವ ಒಂದು ಹಳ್ಳಿಯಲ್ಲಿ ಸಂತೋಷ್ ಡೆನಿಯಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಈಗ ಬೆಂಗಳೂರಿಗೆ ತರಲಾಗುತ್ತಿದೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರ ವಶಕ್ಕೆ ಪಡೆಯಲು ತಯಾರಿ ನಡೆಯುತ್ತಿದೆ.
ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ ಹಚ್ಚಲು ಪೊಲೀಸರು ಸುಮಾರು 1,800 ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ತನಿಖೆಯ ನೇತೃತ್ವವನ್ನು ಡಿಸಿಪಿ ಸಾರಾ ಫಾತೀಮಾ ನೀಡಿದ್ದರು ಮತ್ತು ಅವರು ಎರಡು ತಂಡಗಳನ್ನು ರಚಿಸಿದ್ದರು.
ಅಂದು ಬೆಳಗ್ಗೆ ಯುವತಿ ತನ್ನ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ಹಿಂದಿನಿಂದ ಬಂದು ಕಿರುಕುಳ ನೀಡಿ ಸ್ಥಳದಿಂದ ಪರಾರಿಯಾದ. ಸಂತ್ರಸ್ತೆಗೂ ಆರೋಪಿ ಮಧ್ಯೆ ಯಾವುದೇ ಪರಿಚಯವಿರಲಿಲ್ಲ. ಈ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಗೌಡ ಪೊಲೀಸರಿಗೆ ದೂರು ನೀಡಿದ್ದರು.
ಆತ ತಿಲಕನಗರದ ಗುಲ್ಬರ್ಗ ಕಾಲೋನಿಯ ನಿವಾಸಿಯಾಗಿದ್ದು, 26 ವರ್ಷ ವಯಸ್ಸಿನವನಾಗಿದ್ದಾನೆ. ಕಾರ್ ಶೋರೂಂನಲ್ಲಿ ಟೆಸ್ಟ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. BMW ಬೈಕ್‌ನನ್ನು ಬಳಸಿ ಕೃತ್ಯ ಎಸಗಿದ್ದ ಎನ್ನಲಾಗಿದೆ. ಬೈಕ್ ನಂಬರ್ನಿಂದ ಹಿಡಿದು, ಮನೆಯವರ ವಿಚಾರಣೆವರೆಗೂ ಎಲ್ಲಾ ದಾರಿಗಳ ಮೂಲಕ ಪೊಲೀಸರು ತನಿಖೆ ಮುಂದುವರಿಸಿದ್ದರು.
ಆತನ ಚಲನವಲನದಿಂದ ತಮಿಳುನಾಡು ಮತ್ತು ಕೇರಳದಲ್ಲಿ ಆತ ತಲೆಮರೆಸಿಕೊಂಡಿದ್ದನ್ನೂ ಪೊಲೀಸರು ಪತ್ತೆಹಚ್ಚಿದರು. ಕೊನೆಗೆ, ಆತ ತನ್ನ ಸಂಬಂಧಿಕರ ಮನೆಯಲ್ಲಿ ಇದ್ದು, ಭಾನುವಾರ ಬಂಧನಕ್ಕೊಳಗಾದ.
ಈ ಪ್ರಕರಣದ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ, “ದೊಡ್ಡ ನಗರದಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ” ಎಂಬ ಹೇಳಿಕೆ ನೀಡಿದ್ದಾರೆ. ಇದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.