Bengaluru: ಚಿನ್ನ ಕಳ್ಳಸಾಗಾಣಿಕೆ (smuggling) ಪತ್ತೆ ಮಾಡಿದ ಬೆನ್ನಲ್ಲೇ ಆದಾಯ ಗುಪ್ತಚರ ನಿರ್ದೇಶನಾಲಯ (DRI-Directorate of Revenue Intelligence) ಅಧಿಕಾರಿಗಳು ಮತ್ತೊಂದು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಾರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.4 ಕೋಟಿ ರೂ. ಮೌಲ್ಯದ 3.2 ಕೆಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಘಾನಾ ಮೂಲದ ಜೆನ್ನಿಫರ್ ಅಬ್ಬೇ ಎಂಬುವರು ಕತಾರ್ನ ದೋಹಾದಿಂದ ಬೆಂಗಳೂರಿಗೆ ಆಗಮಿಸಿದ್ದಾಗ, ಡಿಆರ್ಐ ಅಧಿಕಾರಿಗಳು ಅವರನ್ನು ತಪಾಸಣೆಗೊಳಪಡಿಸಿದರು. ಈ ವೇಳೆ ಅವರ ಬಳಿಯಿಂದ ಕೊಕೇನ್ ಪತ್ತೆಯಾಗಿದ್ದು, ಕೂಡಲೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸರು ವಾಹನ ಚಾಲಕನಿಗೆ ಹಣ ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಶಿವಾನಂದ ಮತ್ತು ನಿಖಿಲ್ ಎಂದು ಗುರುತಿಸಲಾಗಿದೆ. ಮಾರ್ಚ್ 14ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ, ಹಾಲು ಮತ್ತು ಮೊಸರು ಪೂರೈಸುತ್ತಿದ್ದ ಚಾಲಕ ರಾಮನ ಬಳಿ 1.28 ಲಕ್ಷ ರೂ. ಹಣವನ್ನು ಐವರು ದರೋಡೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3 ಕೋಟಿ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಸೋಲದೇವನಹಳ್ಳಿ ಬಳಿ ಡ್ರಗ್ಸ್ ಸಂಗ್ರಹಿಸಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಮನೆ ಮೇಲೆ ದಾಳಿ ನಡೆಸಿ 1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಪತ್ತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿ, ಮುಂದಿನ ತನಿಖೆ ಮುಂದುವರಿಸಿದ್ದಾರೆ.