ಕೋಲಾರದ ವಿದ್ಯಾರ್ಥಿನಿಯರು ಮುರುಡೇಶ್ವರದಲ್ಲಿ (Murudeshwar) ಶೈಕ್ಷಣಿಕ ಪ್ರವಾಸದ ವೇಳೆ ಸಮುದ್ರದಲ್ಲಿ ಮುಳುಗಿ ಓರ್ವ ಮೃತಪಟ್ಟಿದ್ದು, ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ಘಟನೆಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿ ಶಾಲಾ ಪ್ರಾಂಶುಪಾಲೆ ಶಶಿಕಲಾರನ್ನು ಅಮಾನತು ಮಾಡಲಾಗಿದ್ದು, ಅಥಿತಿ ಉಪನ್ಯಾಸಕರು ಮತ್ತು ಡಿ-ಗ್ರೂಪ್ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಘಟನೆಯ ನಂತರ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಡಲ ತೀರಕ್ಕೆ ತೆರಳದಂತೆ ಪ್ರವಾಸಿಗರಿಗೆ ಪೊಲೀಸರ ಸೂಚನೆ ನೀಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಮುರುಡೇಶ್ವರ ಪ್ರವಾಸಕ್ಕೆ ತೆರಳಿದ್ದರು. ಸುಮಾರು 54 ವಿದ್ಯಾರ್ಥಿಗಳು ಸಮುದ್ರದಲ್ಲಿ ಆಟವಾಡಲು ಇಳಿದ ವೇಳೆ ಅಲೆಗಳ ಅಬ್ಬರ ಹೆಚ್ಚಾಗಿ, ಆರು ವಿದ್ಯಾರ್ಥಿನಿಯರು ಮತ್ತು ಒಬ್ಬ ಶಿಕ್ಷಕ ನೀರುಪಾಲಾಗಿದ್ದಾರೆ. ಮೂರು ವಿದ್ಯಾರ್ಥಿನಿಯರನ್ನು ಮತ್ತು ಶಿಕ್ಷಕನನ್ನು ಲೈಫ್‌ಗಾರ್ಡ್‌ಗಳು ರಕ್ಷಿಸಿದ್ದಾರೆ.
ಮೃತ ವಿದ್ಯಾರ್ಥಿನಿ ಶಾವಂತಿ (15) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಯಶೋಧಾ, ವೀಕ್ಷಣಾ, ಲಿಪಿಕಾ ರಕ್ಷಿತರಾಗಿದ್ದಾರೆ. ಕಣ್ಮರೆಯಾಗಿರುವ ದೀಕ್ಷಾ, ಲಾವಣ್ಯ, ಮತ್ತು ವಂದನ ಅವರಿಗಾಗಿ ಶೋಧ ಕಾರ್ಯ ಮುಂದುವರಿಯುತ್ತಿದೆ.