Ahmedabad: ಹೂಡಿಕೆದಾರರು ಯಾವ ರಾಜ್ಯಕ್ಕೆ ಹೋಗಬೇಕು ಎಂದು ಗೊಂದಲ ಪಡುವ ಮಟ್ಟಕ್ಕೆ ಎಲ್ಲಾ ರಾಜ್ಯಗಳು ಅಭಿವೃದ್ಧಿ ಕಾಣಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ನಲ್ಲಿ ಮಾತನಾಡಿದ ಪ್ರಧಾನಿ, ಇಡೀ ಜಗತ್ತು ಭಾರತದತ್ತ ಗಮನ ಹರಿಸಿರುವ ಈ ಸಂದರ್ಭದಲ್ಲಿ ಯಾವುದೇ ರಾಜ್ಯ ಹಿಂದುಳಿಯಬಾರದು ಎಂದರು. ಪ್ರತಿಯೊಂದು ರಾಜ್ಯವೂ ಎಲ್ಲಾ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.
ಮೇಕ್ ಇನ್ ಇಂಡಿಯಾ ಯೋಜನೆ ಜಾಗತಿಕ ಮತ್ತು ದೇಶೀಯ ಕಂಪನಿಗಳಿಗೆ ಅನುಕೂಲವಾಗುವ ವಾತಾವರಣ ಸೃಷ್ಟಿಸಿದೆ ಎಂದು ಮೋದಿ ಹೇಳಿದರು. ಜನರು ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು ಎಂದು ಕೋರಿದರು.
ಯಾರು ಹೂಡಿಕೆ ಮಾಡುತ್ತಾರೆ ಎಂಬುದಕ್ಕಿಂತ, ಉತ್ಪನ್ನವನ್ನು ತಯಾರಿಸುತ್ತಿರುವ ಭಾರತೀಯರ ಶ್ರಮವೇ ಮುಖ್ಯ ಎಂದು ಪ್ರಧಾನಿ ಹೇಳಿದರು. ಭಾರತವು ಕೈಗಾರಿಕೆ ಮತ್ತು ಹೂಡಿಕೆಗಳಿಗೆ ಸೂಕ್ತವಾದ ಸ್ಥಳವಾಗಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಜಪಾನ್ ರಾಯಭಾರಿ ಕೀಚಿ ಒನೊ ಉಪಸ್ಥಿತರಿದ್ದರು.