Bengaluru: ಕೋಟ್ಯಂತರ ಮೌಲ್ಯದ ಸರ್ಕಾರಿ ಗೋಮಾಳ ಜಮೀನನ್ನು ಕಬಳಿಸಲಾಗಿದೆ ಎಂಬ ಆರೋಪದ ಮೇಲೆ ಶಾಸಕ ಹೆಚ್.ಸಿ. ಬಾಲಕೃಷ್ಣ, (MLA H.C. Balakrishna) ಮಾಜಿ ಸಚಿವ ಎಸ್ಟಿ ಸೋಮಶೇಖರ್ ಆಪ್ತರು ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳ ಮೇಲೆ ದೂರು ನೀಡಲಾಗಿದೆ. ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ಈ ದೂರು ಸಲ್ಲಿಸಿದ್ದಾರೆ.
ದೂರು: ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿಯ ಸರ್ವೆ ನಂ 233, 234, 235 ಮತ್ತು 236ರ ಅಂಗವಾಗಿ, ಸುಮಾರು 108 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಕಬಳಿಸಲಾಗಿದೆ ಎಂದು ಆರೋಪವಿದೆ.
ಈ ಜಮೀನಿನ ಮೌಲ್ಯ ಸುಮಾರು 800 ಕೋಟಿ ರೂ ಆಗಿದ್ದು, ಇದರಲ್ಲಿ 8 ಎಕರೆ (54 ಕೋಟಿ ರೂ ಮೌಲ್ಯ) ಜಮೀನನ್ನು ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ತಮ್ಮ ಪತ್ನಿ ರಾಧಾ ಬಾಲಕೃಷ್ಣ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂಬುದೂ ದೂರಿನಲ್ಲಿ ಉಲ್ಲೇಖವಾಗಿದೆ.
– ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಕ್ರಮವಾಗಿ ಜಮೀನು ತಮ್ಮ ಹೆಸರಿಗೆ ಹಾಕಿಸಿಕೊಂಡಿದ್ದಾರೆ ಎನ್ನಲಾಗಿದೆ. 2025ರ ಏಪ್ರಿಲ್ 3ರಂದು ಕೆಂಗೇರಿ ಉಪ ನೋಂದಣಿ ಕಚೇರಿಯಲ್ಲಿ ಈ ಜಮೀನು ರಿಜಿಸ್ಟರ್ ಮಾಡಲಾಗಿದೆ.
ಸರ್ಕಾರಿ ದಾಖಲೆಗಳಲ್ಲಿ ತಿದ್ದುಪಡಿ: ಕುರುಬರ ಹಳ್ಳಿ ಗ್ರಾಮದ 130.29 ಎಕರೆ ಪ್ರದೇಶವನ್ನು “ಸರ್ಕಾರಿ ಗೋಮಾಳ” ಎಂದು ಗುರುತಿಸಲಾಗಿತ್ತು.
ಪ್ರಭಾವಿ ವ್ಯಕ್ತಿಗಳು ಸರ್ಕಾರಿ ನೌಕರರ ಸಹಕಾರದಿಂದ ನಕಲಿ ದಾಖಲೆಗಳ ಮೂಲಕ ಈ ಜಮೀನನ್ನು ವಿಭಜಿಸಿ ಹೊಸ ಸರ್ವೆ ನಂಬರಿನಲ್ಲಿ ಹೆಸರು ಬದಲಾವಣೆ ಮಾಡಿದ್ದಾರೆ.
– ಹಿಂದೆ ಮಾಗಡಿ ತಾಲ್ಲೂಕಿಗೆ ಸೇರಿದ್ದ ಈ ಪ್ರದೇಶವನ್ನು ಈಗ ಬೆಂಗಳೂರು ದಕ್ಷಿಣ ತಾಲ್ಲೂಕಿಗೆ ಸೇರಿಸಲಾಗಿದೆ. ಈ ಬದಲಾವಣೆಯೂ ವಿವಾದದ ಕೇಂದ್ರವಾಗಿದೆ.
ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿ ಸರ್ಕಾರಿ ಜಮೀನು ಅಕ್ರಮವಾಗಿ ತಮ್ಮ ಒತ್ತಡದಿಂದ ಕಬಳಿಸುತ್ತಿರುವ ಆಕ್ಷೇಪಗಳ ಮೇಲೆ ಈಗ ತನಿಖೆಗೆ ಒತ್ತಾಸೆಯಾಗಿದೆ.