Ballari: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ(Mysore Urban Development Authority-MUDA) ನಡೆದಿದೆ ಎನ್ನಲಾದ ನಿವೇಶನ ಹಂಚಿಕೆಯಲ್ಲಿನ ಹಗರಣ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಇದರ ನಡುವೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (Bellary Urban Development Authority-BUDA) ಕೂಡ ಅಕ್ರಮಗಳ ಆರೋಪದ ಸುಳಿಯಲ್ಲಿ ಸಿಲುಕಿದೆ. ಈ ಬಗ್ಗೆ ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕರೇ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಸುಮಾರು ಒಂದು ವರ್ಷಗಳಿಂದ ಖಾಲಿಯಿದ್ದ ಬುಡಾ ಅಧ್ಯಕ್ಷ ಸ್ಥಾನದ ಹುದ್ದೆಗೆ ಕಳೆದ ಫೆ.28ರಂದು ಕಾಂಗ್ರೆಸ್ ಮುಖಂಡ ಜೆ.ಎಸ್.ಆಂಜನೇಯಲು ಅವರನ್ನು ರಾಜ್ಯ ಸರಕಾರ ನೇಮಿಸಿ ಆದೇಶ ಹೊರಡಿಸಿತ್ತು. ಇದರಿಂದ ನಗರದ ಅಭಿವೃದ್ಧಿಗೆ, ನೂತನ ಬಡಾವಣೆ ರಚನೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಮರು ಚಾಲನೆ ನೀಡಲು ಸಹಕಾರಿಯಾಗಿತ್ತು
ಆದರೆ, ಈಗ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೇ ನಿವೇಶನ ರಚನೆಗೆ ಅನುಮತಿ ನೀಡುವಲ್ಲಿ, ಹಂಚಿಕೆ ಸೇರಿ ನಾನಾ ವಿಚಾರಗಳಿಗೆ ಸಂಬಂಧಿಸಿದಂತೆ ಅಕ್ರಮದ ಆರೋಪಗಳು ಸ್ಥಳೀಯ ಶಾಸಕರ ವಲಯದಿಂದ ಕೇಳಿಬಂದಿದ್ದು, ಈ ಬಗ್ಗೆ ಸರಕಾರ ತನಿಖೆಗೆ ಆದೇಶ ಹೊರಡಿಸಿದೆ.
ಬುಡಾದಲ್ಲಿ ನಡೆದ ಎರಡು ಸಭೆಗಳಲ್ಲಿ ಅಕ್ರಮದ ಆರೋಪದ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸರಕಾರದ ಅಧೀನ ಕಾರ್ಯದರ್ಶಿ ಅವರಿಂದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯಕ್ಕೆ (Lokayukta) ಪತ್ರ ಬರೆದು ಸಭೆಯ ನಡಾವಳಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ, ಸಭಾ ನಡಾವಳಿ ರದ್ದುಪಡಿಸುವ ಕುರಿತು ಪರಿಶೀಲಿಸಿ, ತನಿಖೆ ನಡೆಸಿ 7ದಿನಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತನಿಖೆಗಾಗಿ ಧಾರವಾಡ ವಲಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಅಪರ ನಿರ್ದೇಶಕರ ನೇತೃತ್ವದಲ್ಲಿ ಅ.3ರಿಂದ 5ರವರೆಗೆ ಬುಡಾ ಕಚೇರಿಯಲ್ಲಿ ತನಿಖೆ ತಂಡದ ವಿಜಯ ಮಹಾಂತೇಶ್ ಎ.ಧಮಾಂತಿ, ನರೇಂದ್ರ ಕುಮಾರ, ಶ್ವೇತಾ ಶಿವಪೂಜೆಮಠ, ಬಿ.ಎಸ್. ಕಾಶಿಮಠ ಅವರನ್ನು ಒಳಗೊಂಡ ಸಮಿತಿ ಮೂರು ದಿನಗಳ ಕಾಲ ಕಡತಗಳ ಪರಿಶೀಲನೆ ನಡೆಸಿ ಸರಕಾರಕ್ಕೆ ತನಿಖಾ ವರದಿ ಸಲ್ಲಿಸಲಿದೆ.