Bengaluru: ಕನ್ನಡ ಸಾಹಿತ್ಯ ಪರಿಷತ್ (ಕಸಾಪ-Kasapa) 2023-24ನೇ ಸಾಲಿನಲ್ಲಿ ಆದಾಯ, ಅನುದಾನ, ಖರೀದಿ ಹಾಗೂ ಮಾರಾಟದಲ್ಲಿ ನಡೆದಿರುವಂತೆ ಆರೋಪಿಸಲಾಗಿರುವ ಅವ್ಯವಹಾರದ ಕುರಿತು ತನಿಖೆ ನಡೆಸಲು ಸಹಕಾರ ಸಂಘಗಳ ಉಪ ನಿಬಂಧಕರು ವಿಚಾರಣಾಧಿಕಾರಿಗಳನ್ನು ನೇಮಿಸಿದ್ದರು. ಈ ಕ್ರಮವನ್ನು ತಡೆಯಲು ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ (High Court) ತಿರಸ್ಕರಿಸಿದೆ. ತನಿಖಾ ಪ್ರಕ್ರಿಯೆ ನ್ಯಾಯಾಲಯದ ಅಂತಿಮ ಆದೇಶದ ಆಧೀನವಾಗಿರುತ್ತದೆ ಎಂದು ಹೈಕೋರ್ಟ್ ತಿಳಿಸಿದೆ.
2023-24ನೇ ಸಾಲಿನ ವಾರ್ಷಿಕ ಸಭೆ ರದ್ದುಪಡಿಸಿ, ಪದಾಧಿಕಾರಿಗಳ ಕಾರ್ಯವೈಖರಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಗಾಗಿ ಉಪ ನಿಬಂಧಕರು 2025ರ ಜೂನ್ 26 ಮತ್ತು 30ರಂದು ವಿಚಾರಣಾಧಿಕಾರಿಗಳನ್ನು ನೇಮಿಸಿದ್ದರು. ಈ ಆದೇಶಗಳು ರದ್ದಾಗಬೇಕು ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ಪೀಠ, ಕಾನೂನು ಪ್ರಕ್ರಿಯೆಯೊಳಗೇ ಈ ತನಿಖೆ ನಡೆಯಬೇಕು ಎಂದು ತೀರ್ಮಾನಿಸಿದೆ.
ಕಸಾಪ ಕಾರ್ಯಕಾರಿ ಸಮಿತಿಯು ಬಳ್ಳಾರಿಯ ಸಂಡೂರಿನಲ್ಲಿ ಜೂನ್ 29ರಂದು ಕರೆಯಲಾದ ವಾರ್ಷಿಕ ಸಾಮಾನ್ಯ ಸಭೆಯನ್ನು ಸಹ ರದ್ದುಗೊಳಿಸಲಾಗಿದೆ. ಜೂನ್ 27ರಂದು ಉಪ ನಿಬಂಧಕರು ನೀಡಿದ್ದ ಸಭೆ ರದ್ದುಗೊಳಿಸುವ ಆದೇಶ ಕೂಡಾ ರದ್ದುಮಾಡಲಾಗಿದೆ. ಮುಂದಿನ ವಿಚಾರಣೆ ಆಗಸ್ಟ್ 4ಕ್ಕೆ ಮುಂದೂಡಲಾಗಿದೆ.
ಜಾಣಗೆರೆ ವೆಂಕಟರಾಮಯ್ಯ ಹಾಗೂ ಡಾ. ವಸುಂಧರ ಭೂಪತಿ ಎಂಬವರು ಸಂಡೂರಿನಲ್ಲಿ ನಡೆಯಬೇಕಾದ ವಾರ್ಷಿಕ ಸಭೆ ರದ್ದುಗೊಳಿಸಬೇಕು ಎಂದು ಸಹಕಾರ ಉಪ ನಿಬಂಧಕರಿಗೆ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಉಪ ನಿಬಂಧಕರು ಸಭೆ ರದ್ದುಪಡಿಸಿದ್ದರು.
ಹಾಗೆಯೇ, ಎನ್. ಹನುಮೇಗೌಡ ಸೇರಿದಂತೆ ಇತರರ ದೂರಿನಲ್ಲಿ ಕಸಾಪ ಅಧ್ಯಕ್ಷರಿಂದ ನಿಯಮವಿರೋಧವಾಗಿ ನೋಟಿಸ್‌ಗಳು ಜಾರಿಗೊಂಡಿದ್ದು, ಆದಾಯ ದುರುಪಯೋಗ, ಖರೀದಿ-ಮಾರಾಟದ ಅವ್ಯವಹಾರಗಳ ಆರೋಪಗಳು ಉಂಟಾಗಿವೆ. ಇದನ್ನೆಲ್ಲಾ ಪರಿಶೀಲಿಸಲು ಜೂನ್ 30ರಂದು ವಿಚಾರಣಾಧಿಕಾರಿಗಳನ್ನು ನೇಮಿಸಿ ಆದೇಶ ನೀಡಲಾಗಿದೆ. ಈ ಎಲ್ಲ ಆದೇಶಗಳನ್ನು ರದ್ದುಪಡಿಸುವಂತೆ ಮಹೇಶ್ ಜೋಷಿ ಕೋರಿದ್ದರು.