ಅಂಬೇಡ್ಕರ್ (Ambedkar) ಅವರ ಕುರಿತ ಹೇಳಿಕೆಯಿಂದ ವಿರೋಧ ಪಕ್ಷಗಳು ಗೃಹ ಸಚಿವ ಅಮಿತ್ ಶಾರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿರುವ ನಡುವೆಯೇ, ಪ್ರಧಾನಿ ಮೋದಿ ಅಮಿತ್ ಶಾ ಅವರ ಬೆಂಬಲದಲ್ಲಿ ನಿಂತಿದ್ದಾರೆ. ಹಲವು ಟ್ವೀಟ್ ಗಳ ಮೂಲಕ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ತಮ್ಮ ಟ್ವೀಟ್‌ಗಳಲ್ಲಿ, “ ಕಾಂಗ್ರೆಸ್ ನ ದೀರ್ಘಕಾಲದ ಕುತಂತ್ರಗಳು ಮತ್ತು ದುಷ್ಕೃತ್ಯಗಳನ್ನು ಮರೆಮಾಡಲು ಸಾಧ್ಯವಿಲ್ಲ,” ಎಂದು ತಿಳಿಸಿದರು.
ಇಂದು ಎಲ್ಲದಕ್ಕೂ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೆಸರೆತ್ತುವುದು ಫ್ಯಾಷನ್ ಆಗಿ ಹೋಗಿದೆ. ಇಷ್ಟು ಬಾರಿ ದೇವರ ಹೆಸರನ್ನು ಹೇಳಿದ್ದರೆ, ಏಳು ಜನ್ಮದ ಸ್ವರ್ಗವಾದರೂ ಸಿಕ್ಕಿರುತ್ತಿತ್ತು ಎಂದು ವಿರೋಧ ಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಮಲ್ಲಿಕಾರ್ಜುನ ಖರ್ಗೆ ಅವರು ಅಮಿತ್ ಶಾ ಅವರ ರಾಜೀನಾಮೆ ಹಾಗೂ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಇದರ ಬೆನ್ನಲ್ಲೇ, ಮೋದಿ ಟ್ವೀಟ್ ಮಾಡಿ, “ಕಾಂಗ್ರೆಸ್ ಎಸ್ಸಿ/ಎಸ್ಟಿ ಸಮುದಾಯಗಳನ್ನು ಯಾವತ್ತೂ ಬಲಪಡಿಸಲಿಲ್ಲ. ಅಂಬೇಡ್ಕರ್ ಪರಂಪರೆಯನ್ನು ಅಳಿಸಿಹಾಕಲು ದುಷ್ಕೃತ್ಯ ನಡೆಸಿದೆ,” ಎಂದು ಕಟುವಾಗಿ ಟೀಕಿಸಿದರು.
ಅಮಿತ್ ಶಾ ಅವರ ಭಾಷಣದಲ್ಲಿ ಬಾಬಾಸಾಹೇಬರಿಗೆ ಅವಮಾನ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪ, ರಾಜ್ಯಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಕಾಂಗ್ರೆಸ್ ಆಡಳಿತದಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳು ಅನುಭವಿಸಿದ ಅಹಿತಕರ ಘಟನೆಗಳನ್ನು ಮೋದಿ ಮತ್ತು ಅಮಿತ್ ಶಾ ಬಹಿರಂಗಪಡಿಸಿದರು.
ಅಂಬೇಡ್ಕರ್ ವಿವಾದ ಹಾಗೂ ಅದರ ಹಿನ್ನೆಲೆಯು ರಾಜಕೀಯ ವಾಗ್ದಾಳಿಗೆ ಕಾರಣವಾಗಿದ್ದು, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.