Washington: ಅಮೆರಿಕ ಸರ್ಕಾರ ಶ್ರೀಮಂತ ವಿದೇಶಿಯರಿಗೆ ಮಾತ್ರ ಅವಕಾಶ ನೀಡಲು ಹೊಸ ಗೋಲ್ಡ್ ಕಾರ್ಡ್ ಇನ್ವೆಸ್ಟರ್ ವೀಸಾ (Gold Card Visa) ಯೋಜನೆಯನ್ನು ಘೋಷಿಸಿದೆ. ಈ ಹೊಸ ವೀಸಾ ಪಡೆಯಲು ಕನಿಷ್ಟ 5 ಮಿಲಿಯನ್ ಡಾಲರ್ (ಸುಮಾರು 45 ಕೋಟಿ ರೂ) ಹೂಡಿಕೆ ಮಾಡಬೇಕಾಗುತ್ತದೆ.
ಇದಕ್ಕೂ ಮುನ್ನ, ಅಮೆರಿಕಕ್ಕೆ ವಲಸೆ ಹೋಗಲು ಇಬಿ-5 ವೀಸಾ (ಗ್ರೀನ್ ಕಾರ್ಡ್ ಪ್ರೋಗ್ರಾಂ) ಪ್ರಚಲಿತದಲ್ಲಿತ್ತು. ಇದರಿಂದ ಹೂಡಿಕೆದಾರರು ಅಮೆರಿಕದಲ್ಲಿ ಖಾಯಂ ನಿವಾಸ ಪಡೆಯಲು ಅವಕಾಶವಿತ್ತು. ಈ ವೀಸಾ ಪಡೆಯಲು 1.05 ಮಿಲಿಯನ್ ಡಾಲರ್ ಹೂಡಿಕೆ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ 8 ಲಕ್ಷ ಡಾಲರ್ ಹೂಡಿಕೆ ಮಾಡಬೇಕು ಎಂಬ ನಿಯಮವಿತ್ತು. ಹಲವಾರು ಭಾರತೀಯರು ಈ ವೀಸಾದ ಮೂಲಕ ವಲಸೆ ಹೋಗುವ ಪ್ರಯತ್ನ ಮಾಡುತ್ತಿದ್ದರು.
ಈಗ ತರುವ ಗೋಲ್ಡ್ ಕಾರ್ಡ್ ವೀಸಾ ಯೋಜನೆಯಲ್ಲಿ ಹೂಡಿಕೆಯ ಮೊತ್ತವನ್ನು ಹೆಚ್ಚಿಸಿ 5 ಮಿಲಿಯನ್ ಡಾಲರ್ ಮಾಡಲಾಗಿದೆ. ಇದರಿಂದ ಶ್ರೀಮಂತ ವಿದೇಶಿಗರನ್ನು ಆಕರ್ಷಿಸುವ ಯೋಜನೆ ಎಂದು ಅಮೆರಿಕ ಸರ್ಕಾರ ಹೇಳುತ್ತಿದೆ. ‘ಅವರು ಹೂಡಿಕೆ ಮಾಡುವ ಮೂಲಕ ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತಾರೆ’ ಎಂಬುದಾಗಿ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಪಡೆಯಲು ಸಾವಿರಾರು ಭಾರತೀಯರು ಕಾಯುತ್ತಿದ್ದಾರೆ, ಕೆಲವರು 50 ವರ್ಷಗಳಿಗೂ ಹೆಚ್ಚು ಕಾಲ ನಿರೀಕ್ಷೆಯಲ್ಲಿದ್ದಾರೆ. ಎಂಜಿನಿಯರುಗಳು, ವೈದ್ಯರು, ತಂತ್ರಜ್ಞರು ಸೇರಿದಂತೆ ಹಲವರು ಅಮೆರಿಕದ ಪೌರತ್ವ ನಿರೀಕ್ಷೆಯಲ್ಲಿ ಇದ್ದಾರೆ.
ಭಾರತೀಯ ಅಮೆರಿಕನ್ ಅಜಯ್ ಭುತೋರಿಯಾ ಹೊಸ ಯೋಜನೆಯನ್ನು ಟೀಕಿಸಿ, ‘ಶ್ರೀಮಂತ ವಿದೇಶಿಗರಿಗೆ ಮಾತ್ರ ಅವಕಾಶ ನೀಡುವ ಬದಲು ಪ್ರತಿಭಾನ್ವಿತ ವಲಸಿಗರಿಗೆ ಅವಕಾಶ ನೀಡುವಂತೆ ವಲಸೆ ನೀತಿಯಲ್ಲಿ ಸುಧಾರಣೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಈ ಹೊಸ ಯೋಜನೆ ಇನ್ನೆರಡು ವಾರಗಳಲ್ಲಿ ಜಾರಿಗೆ ಬರಲಿದ್ದು, ಸಾಮಾನ್ಯ ವಲಸಿಗರಿಗೆ ಇದರಿಂದ ಯಾವುದೇ ಲಾಭವಾಗದೆ, ಶ್ರೀಮಂತರಿಗೆ ಮಾತ್ರ ಪ್ರಯೋಜನವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.