ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ನಟನೆಯ ‘ಛಾವಾ’ (Chhaava) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಮೊದಲ ಎರಡು ದಿನ ಸಾಮಾನ್ಯ ಕಲೆಕ್ಷನ್ ಕಂಡಿದ್ದ ಈ ಸಿನಿಮಾ, ದಿನೇ ದಿನೇ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಭಾರಿ ಗಳಿಕೆ ಮಾಡುತ್ತಿದೆ.
ಸಿನಿಮಾ ಬಿಡುಗಡೆ ಆಗಿ ಆರು ದಿನಗಳಾಗಿದ್ದು, ದಿನದಿಂದ ದಿನಕ್ಕೆ ಕಲೆಕ್ಷನ್‌ನಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಆರನೇ ದಿನದಂದು ಈ ಸಿನಿಮಾ 32 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟೂ 198 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಐದನೇ ದಿನ 25 ಕೋಟಿ ಕಲೆಕ್ಷನ್ ಕಂಡಿದ್ದರೆ, ಆರನೇ ದಿನ 32 ಕೋಟಿ ಗಳಿಸುವ ಮೂಲಕ ಬಿಗ್ ಹಿಟ್ ಆಗಿದೆ.
ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳಾದ ‘ಪುಷ್ಪ 2’ ಮತ್ತು ‘ಅನಿಮಲ್’ ಗಳಿಸಿದ್ದ ದಾಖಲೆಗಳನ್ನು ‘ಛಾವಾ’ ಸಿನಿಮಾ ಮುರಿದಿದೆ. ‘ಅನಿಮಲ್’ ಸಿನಿಮಾ ಆರನೇ ದಿನ 25 ಕೋಟಿ, ‘ಪುಷ್ಪ 2’ 30 ಕೋಟಿ ಗಳಿಸಿದ್ದರೆ, ‘ಛಾವಾ’ 32 ಕೋಟಿ ರೂ. ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ.
‘ಛಾವಾ’ ಸಿನಿಮಾ ಮಹಾರಾಜ ಸಾಂಬಾಜಿಯವರ ಜೀವನವನ್ನು ಆಧರಿಸಿ ಮಾಡಲಾಗಿದೆ. ಇದು ಶಿವಾಜಿ ಸಾವಂತ್ ಅವರ ಕಾದಂಬರಿಯ ಆಧಾರಿತವಾಗಿದೆ. ಈ ಚಿತ್ರದಲ್ಲಿ ಸಾಂಬಾಜಿಯ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ಔರಂಗಜೇಬ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಎಆರ್ ರೆಹಮಾನ್ ಸಂಗೀತ ನೀಡಿದ ಈ ಸಿನಿಮಾವನ್ನು ಮ್ಯಾಡಾಕ್ ಫಿಲಮ್ಸ್ ನಿರ್ಮಾಣ ಮಾಡಿದ್ದು, ಲಕ್ಷ್ಮಣ ಉಟೇಖರ್ ನಿರ್ದೇಶನ ಮಾಡಿದ್ದಾರೆ.