
Bengaluru: ಅನ್ನಭಾಗ್ಯ ಯೋಜನೆಯಡಿ (Annabhagya Yojana) ಈವರೆಗೆ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲು 170 ರೂ. ಹಣ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ನಗದು ಸಹಾಯವಷ್ಟೇ ಅಲ್ಲ, ಪುನಃ 10 ಕೆಜಿ ಅಕ್ಕಿಯನ್ನೇ ವಿತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿಯಪ್ಪ, ಫೆಬ್ರವರಿಯಿಂದಲೇ ಈ ತೀರ್ಮಾನವನ್ನು ಜಾರಿಗೆ ತರುವುದಾಗಿ ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾರಕ್ಕೆ ಅಗತ್ಯವಾದ 5 ಕೆಜಿ ಹೆಚ್ಚುವರಿ ಅಕ್ಕಿಯನ್ನು ವಿತರಿಸಲು ಕೇಂದ್ರ ಸರ್ಕಾರವೂ ಒಪ್ಪಿಗೆ ನೀಡಿದೆ. ಪ್ರತಿ ತಿಂಗಳಿಗೆ 2.29 ಲಕ್ಷ ಮೆಟ್ರಿಕ್ ಟನ್ ಹಾಗೂ ವರ್ಷಕ್ಕೆ 27.48 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ ಎಂದರು.
ಅಕ್ಕಿ ವಿತರಣೆ ಕುರಿತು ರಾಜ್ಯ ಸರ್ಕಾರ ಕಳುಹಿಸಿದ ಮನವಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಂದಿಸಿದ್ದು, ಅಕ್ಕಿ ಪೂರೈಸಲು ಒಪ್ಪಿಕೊಂಡಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ನವೆಂಬರದವರೆಗೆ ಫಲಾನುಭವಿಗಳಿಗೆ ಹಣ ವಿತರಿಸಿದ್ದು, ಜನವರಿವರೆಗೆ ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಹಣ ನೀಡುವ ಪ್ರಕ್ರಿಯೆ ಮುಂದುವರೆದಿದೆ.
ಮೊದಲು ಕೇಂದ್ರ ಸರ್ಕಾರ ಒಂದು ಕೆಜಿ ಅಕ್ಕಿಗೆ ₹28 ನಿಗದಿಪಡಿಸಿದ್ದರೆ, ಜನವರಿಯಿಂದ ಅದನ್ನು ₹22.50ಕ್ಕೆ ಪರಿಷ್ಕರಿಸಲಾಗಿದೆ. ಈ ದರ ಪರಿಷ್ಕರಣೆ ಕಾರಣದಿಂದ ಕೆಲವು ತಿಂಗಳು ಹಣವಿತರಣೆಯಲ್ಲಿ ತಡವಾಯಿತು. ಆದರೆ ಒಂದು ವಾರದೊಳಗೆ ಬಾಕಿ ಹಣ ಹಂಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಭರವಸೆ ನೀಡಿದರು.
2013ರಲ್ಲಿ ಪ್ರಾರಂಭವಾದ ಅನ್ನಭಾಗ್ಯ ಯೋಜನೆಯು ಈಗ ಮತ್ತಷ್ಟು ಬಲವರ್ಧಿತಗೊಂಡಿದ್ದು, ರಾಜ್ಯದ ಜನತೆಗೆ ಪೂರ್ತಿ 10 ಕೆಜಿ ಅಕ್ಕಿ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.