
ಎರಡು ರಾಜ್ಯಗಳಾದ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (assembly elections) ದಿನಾಂಕ ಘೋಷಣೆಯಾಗಿದೆ. ಇದರ ಜೊತೆಗೆ ಕೇಂದ್ರ ಚುನಾವಣಾ ಆಯೋಗವು (Central Election Commission) ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನೂ ಸಹ ಪ್ರಕಟಿಸಿದೆ.
ಕರ್ನಾಟಕ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಇಂದು (ಅಕ್ಟೋಬರ್ 15) ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದರು.
ಇದೇ ವೇಳೆ ಕರ್ನಾಟಕದ ಶಿಗ್ಗಾಂವಿ(ಹಾವೇರಿ), ಚನ್ನಪಟ್ಟಣ (ರಾಮನಗರ) ಮತ್ತು ಸಂಡೂರು(ಬಳ್ಳಾರಿ ಜಿಲ್ಲೆ) ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಪ್ರಕಟಿಸಿದ್ದು, ನವೆಂಬರ್ 13ರಂದು ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇನ್ನು ನವೆಂಬರ್ 23ರಂದು ಈ ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಪ್ರಮುಖ ದಿನಾಂಕಗಳು
- ಅಕ್ಟೋಬರ್ 18ರಿಂದ ಉಪಚುನಾವಣೆಗೆ ಅಧಿಸೂಚನೆ ಪ್ರಕಟ
- ಅಕ್ಟೋಬರ್ 25ರಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಕೊನೆ ದಿನ
- ಅಕ್ಟೋಬರ್ 28ರಂದು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ
- ಅಕ್ಟೋಬರ್ ಅ.30ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ
ಮೂರು ಪಕ್ಷಗಳಲ್ಲಿ ಬೈ ಎಲೆಕ್ಷನ್ ಸಂಬಂಧ ತಯಾರಿ ಜೋರಾಗಿದೆ. HD ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಶಾಸಕ ಸ್ಥಾನ, ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾಗಿದ್ದ ಶಿಗ್ಗಾವಿ ಹಾಗೂ ತುಕಾರಾಂ ರಾಜೀನಾಮೆಯಿಂದ ತೆರವಾಗಿದ್ದ ಸಂಡೂರು ಶಾಸಕ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.