Rohtak (Haryana): ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಮಧ್ಯೆ, ಇದೀಗ ಮತ್ತೊಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹ್ಟಕ್‌ನ ತಮ್ಮ ಜಮೀನಿನಲ್ಲಿರುವ ಕೊಠಡಿಯಲ್ಲಿ ಸಹಾಯಕ ಉಪ ಪೊಲೀಸ್ ನಿರೀಕ್ಷಕ (ಎಎಸ್ಐ) ಸಂದೀಪ್ ಲಾಥರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಅಲ್ಲಿ ಪಿಸ್ತೂಲ್ ಮತ್ತು death note ಪತ್ತೆಯಾಗಿದೆ. ಘಟನೆಯ ಕುರಿತು ತನಿಖೆ ಮುಂದುವರಿಯುತ್ತಿದೆ.
ರೋಹ್ಟಕ್ ಎಸ್ಪಿ ಸುರೇಂದ್ರ ಭೋರಿಯಾ ಅವರ ಮಾಹಿತಿ ಪ್ರಕಾರ, ಮೃತರಾದ ಸಂದೀಪ್ ಲಾಥರ್ ಅವರು ರೋಹ್ಟಕ್‌ನ ಸೈಬರ್ ಸೆಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆತ್ಮಹತ್ಯೆಗೆ ಮುನ್ನ ಅವರು death note ಬರೆದಿದ್ದರು ಮತ್ತು ಕರ್ತವ್ಯ ಪಿಸ್ತೂಲ್ ಸಹ ಸ್ಥಳದಲ್ಲೇ ಸಿಕ್ಕಿದೆ.
ಸಂದೀಪ್ ಲಾಥರ್ ಅವರನ್ನು ಸಹೋದ್ಯೋಗಿಗಳು ಪ್ರಾಮಾಣಿಕ ಮತ್ತು ಪರಿಶ್ರಮಿ ಅಧಿಕಾರಿ ಎಂದು ವರ್ಣಿಸಿದ್ದಾರೆ. ಈ ಘಟನೆ ಎಲ್ಲರಿಗೂ ಆಘಾತ ತಂದಿದೆ. ವಿಧಿವಿಜ್ಞಾನ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆಯ ನಿಜ ಕಾರಣ ತನಿಖೆಯ ನಂತರ ತಿಳಿಯಲಿದೆ.
ಐಪಿಎಸ್ ಅಧಿಕಾರಿ ವೈ. ಪೂರನ್ ಕುಮಾರ್ ಆತ್ಮಹತ್ಯೆ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ ಆರೋಪಗಳು ಕೇಳಿಬಂದಿದ್ದು, ಮೃತ ಅಧಿಕಾರಿ ಕುಟುಂಬ ಹಾಗೂ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿವೆ.
ಈ ಹಿನ್ನೆಲೆಯಲ್ಲಿ, ಸರ್ಕಾರ ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು ರಜೆ ಮೇಲೆ ಕಳುಹಿಸಿದ್ದು, ರೋಹ್ಟಕ್ ಎಸ್ಪಿ ನರೇಂದ್ರ ಬಿಜರ್ನಿಯಾ ಅವರನ್ನು ವರ್ಗಾವಣೆ ಮಾಡಿದೆ.
ಹರಿಯಾಣ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ರಾಜೀವ್ ಜೈಟ್ಲಿ ಅವರು “ಹೌದು, ಡಿಜಿಪಿಯನ್ನು ರಜೆ ಮೇಲೆ ಕಳುಹಿಸಲಾಗಿದೆ” ಎಂದು ದೃಢಪಡಿಸಿದ್ದಾರೆ.
ಕುಮಾರ್ ಆತ್ಮಹತ್ಯೆಗೆ ಏಳು ದಿನಗಳಾದರೂ, ಅವರ ಕುಟುಂಬವು ಶವಪರೀಕ್ಷೆ ಹಾಗೂ ಅಂತ್ಯಕ್ರಿಯೆಗೆ ಒಪ್ಪಿಲ್ಲ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೃತ ಅಧಿಕಾರಿ ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.