ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಗಗನಯಾನ ಮಾನವ ಬಾಹ್ಯಾಕಾಶ ಮಿಷನ್‌ಗಾಗಿ ಮತ್ತೊಂದು ಮಹತ್ವದ ಹಂತವನ್ನು ತಲುಪಿದೆ. ಜುಲೈ 3 ರಂದು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಕೇಂದ್ರದಲ್ಲಿ ಗಗನಯಾನ ಸೇವಾ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್ (SMPS) ಮೇಲೆ ಎರಡು “ಹಾಟ್ ಟೆಸ್ಟ್”ಗಳನ್ನು (Hot Test) ಯಶಸ್ವಿಯಾಗಿ ನಡೆಸಲಾಗಿದೆ.
ಇಸ್ರೋ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಈ ಪರೀಕ್ಷೆಗಳು ಕ್ರಮವಾಗಿ 30 ಸೆಕೆಂಡು ಮತ್ತು 100 ಸೆಕೆಂಡುಗಳ ಕಾಲ ನಡೆದವು. ಇದರ ಉದ್ದೇಶ, ಈ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಪರೀಕ್ಷಿಸುವುದಾಗಿತ್ತು. ಪರೀಕ್ಷೆಗಳ ಸಮಯದಲ್ಲಿ ಎಲ್ಲಾ ಪೀಠಿಕೆಗಳು ನಿರೀಕ್ಷೆಯಂತೆ ಕೆಲಸ ಮಾಡಿದ್ದು, ಮುನ್ನೋಟದಂತೆ ಫಲಿತಾಂಶ ಬಂದಿದ್ದು ಇಸ್ರೋ ಆತ್ಮವಿಶ್ವಾಸದಿಂದ ತುಂಬಿದೆ.
100 ಸೆಕೆಂಡುಗಳ ಪರೀಕ್ಷೆಯಲ್ಲಿ, ಎಲ್ಲ ರಿಯಾಕ್ಷನ್ ಕಂಟ್ರೋಲ್ ಸಿಸ್ಟಮ್ (RCS) ಥ್ರಸ್ಟರ್‌ಗಳು ಮತ್ತು ಲಿಕ್ವಿಡ್ ಅಪೋಜಿ ಮೋಟರ್‌ಗಳು (LAM) ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು. ಈ ಪರೀಕ್ಷೆಗೆ ಬಳಸಲಾದ ಮಾದರಿಯನ್ನು ಹಿಂದಿನ ಪರೀಕ್ಷೆಗಳಿಂದ ಪಡೆದ ಅನುಭವದಿಂದ ಸುಧಾರಣೆ ಮಾಡಲಾಗಿತ್ತು.
ಈ ವ್ಯವಸ್ಥೆಯಲ್ಲಿ ಐದು LAM ಎಂಜಿನ್‌ಗಳು ಮತ್ತು 16 RCS ಥ್ರಸ್ಟರ್‌ಗಳು ಇರುತ್ತದೆ. ಇವು ಕ್ರಮವಾಗಿ 440 ನ್ಯೂಟನ್ ಮತ್ತು 100 ನ್ಯೂಟನ್ ಶಕ್ತಿ ನೀಡುತ್ತವೆ.
ಇದು ಇಸ್ರೋ ನವರ ಗಗನಯಾನ ಯೋಜನೆಯ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಮುಂಬರುವ ದಿನಗಳಲ್ಲಿ ಇಸ್ರೋ ಪೂರ್ಣಾವಧಿಯ ಹಾಟ್ ಟೆಸ್ಟ್ ನಡೆಸಲು ಸಜ್ಜಾಗಿದೆ.
ಗಗನಯಾನ ಯೋಜನೆಯು ಮೂರು ಭಾರತೀಯರನ್ನು ಮೂರು ದಿನಗಳ ಕಾಲ 400 ಕಿಲೋಮೀಟರ್ ಎತ್ತರದ ಕಕ್ಷೆಗೆ ಕಳುಹಿಸಿ, ನಂತರ ಭೂಮಿಗೆ ಸುರಕ್ಷಿತವಾಗಿ ಮರಳಿಸಲು ಉದ್ದೇಶಿಸಿದೆ. ಇದಕ್ಕಾಗಿ ವಿಶೇಷ ಉಡಾವಣಾ ವಾಹನ, ಜೀವ ಬೆಂಬಲ ವ್ಯವಸ್ಥೆ, ತುರ್ತು ತಪ್ಪಿಸಿಕೊಳ್ಳುವ ವ್ಯವಸ್ಥೆ, ಸಿಬ್ಬಂದಿಗೆ ತರಬೇತಿ ಮತ್ತು ಚೇತರಿಕೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಭಾಗವಹಿಸಿದ ‘ಆಕ್ಸಿಯಮ್ ಮಿಷನ್ 4’ ಮಿಷನ್ ಇಸ್ರೋಗೆ ಬಹುಮೌಲ್ಯವಾದ ಅನುಭವ ಮತ್ತು ಮಾಹಿತಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.