ಏಷ್ಯಾ ಕಪ್ (Asia Cup) ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು ಸೂಪರ್ ಓವರ್ನಲ್ಲಿ ಮಣಿಸಿದೆ. ಈ ಗೆಲುವಿನಿಂದ ಸೂರ್ಯಕುಮಾರ್ ಯಾದವ್ ಬಳಗ ಅಜೇಯವಾಗಿ ಫೈನಲ್ ಪ್ರವೇಶಿಸಿತು.
ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 202 ರನ್ ಗಳಿಸಿತು. ಅಭಿಷೇಕ್ ಶರ್ಮಾ ಕೇವಲ 31 ಎಸೆತಗಳಲ್ಲಿ 61 ರನ್ ಸಿಡಿಸಿದರು. ತಿಲಕ್ ವರ್ಮಾ 49 ರನ್ (ಔಟಾಗದೆ), ಸಂಜು ಸ್ಯಾಮ್ಸನ್ 39 ರನ್, ಅಕ್ಷರ್ ಪಟೇಲ್ 15 ರನ್ (ಔಟಾಗದೆ) ಸೇರಿಸಿದರು. ಶುಭಮನ್ ಗಿಲ್ (4), ಸೂರ್ಯಕುಮಾರ್ ಯಾದವ್ (12), ಹಾರ್ದಿಕ್ ಪಾಂಡ್ಯ (2) ಬೇಗನೇ ಔಟಾದರು.
ಬೃಹತ್ ಗುರಿ ಬೆನ್ನತ್ತಿದ ಲಂಕಾ ಕೂಡ 20 ಓವರ್‌ಗಳಲ್ಲಿ 202 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿತು. ಪಥುಮ್ ಸಿಸಾಂಕ ಶತಕ (107) ಮತ್ತು ಕುಸಾಲ ಪೆರೆರಾ ಅರ್ಧಶತಕ (58) ಬಾರಿಸಿ ರೋಚಕತೆ ಹೆಚ್ಚಿಸಿದರು.
ಸೂಪರ್ ಓವರ್‌ನಲ್ಲಿ ಅರ್ಶದೀಪ್ ಸಿಂಗ್ ಕೇವಲ 2 ರನ್ ಮಾತ್ರ ಬಿಟ್ಟುಕೊಟ್ಟರು. ನಂತರ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲೇ ಗೆಲುವು ಖಚಿತಪಡಿಸಿದರು.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಈ ಆವೃತ್ತಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿ, ತಂಡಕ್ಕೆ ಭರ್ಜರಿ ಆರಂಭ ನೀಡಿದ್ದಾರೆ.
ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಅಜೇಯ ಭಾರತ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.
ಸಂಕ್ಷಿಪ್ತ ಸ್ಕೋರ್
- ಭಾರತ: 202/5 (20 ಓವರ್)
- ಶ್ರೀಲಂಕಾ: 202/5 (20 ಓವರ್)
- ಸೂಪರ್ ಓವರ್: ಭಾರತ ಗೆಲುವು