New Delhi: ದಿಲ್ಲಿಯ ನೂತನ ಹಾಗೂ ಎಂಟನೇ ಮುಖ್ಯಮಂತ್ರಿಯಾಗಿ ಆತಿಶಿ (Atishi Marlena) ಮರ್ಲೇನಾ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು. ರಾಜಧಾನಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾದ ಅವರು, ತಮ್ಮ ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, ಅವರು ಸಿಎಂ ಆಗಿದ್ದಾಗ ಬಳಸುತ್ತಿದ್ದ ಕುರ್ಚಿಯ ಪಕ್ಕದಲ್ಲಿ ಬೇರೆ ಆಸನದಲ್ಲಿ ಕೂತಿದ್ದಾರೆ. ಕೇಜ್ರಿವಾಲ್ ಅವರು ಕೂರುತ್ತಿದ್ದ ಕುರ್ಚಿಯನ್ನು ಖಾಲಿ ಬಿಟ್ಟಿದ್ದಾರೆ.
CM ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆತಿಶಿ, (Athishi ) ತಮ್ಮ ಪ್ರಸ್ತುತದ ಸ್ಥಿತಿಯನ್ನು, ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇರಿಸಿ ರಾಜ್ಯಭಾರ ನಡೆಸಿದ ರಾಮಾಯಣದ ಭರತನಿಗೆ ಹೋಲಿಸಿದರು.
ಮುಂಬರುವ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಜನರು ಶೀಘ್ರವೇ ಮರಳಿ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.