Dubai/Hyderabad: ದುಬೈನಲ್ಲಿ (Dubai) ನಡೆದ ದಾಳಿಯಲ್ಲಿ ತೆಲಂಗಾಣದ (Telangana) ಇಬ್ಬರು ಯುವಕರು ಸಾವಿಗೀಡಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ವ್ಯಕ್ತಿಯೊಬ್ಬ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಒಂದು ಬೇಕರಿಯಲ್ಲಿ ಕೆಲಸ ಮಾಡುವವರ ಮೇಲೆ ದಾಳಿ ನಡೆಸಿದ್ದಾನೆ ಎಂದು ಮೃತರ ಕುಟುಂಬದವರು ತಿಳಿಸಿದ್ದಾರೆ.
ನಿರ್ಮಲ್ ಜಿಲ್ಲೆಯ ಸೋನ್ ಗ್ರಾಮದ ಪ್ರೇಮಸಾಗರ್ (35) ಮತ್ತು ನಿಜಾಮಾಬಾದ್‌ನ ಶ್ರೀನಿವಾಸ್ ಸಾವಿಗೀಡಾಗಿದ್ದಾರೆ. ಸಾಗರ್ ಎಂಬ ಇನ್ನೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿ ಅವರು ಕೆಲಸ ಮಾಡುತ್ತಿದ್ದ ಬೇಕರಿಯಲ್ಲಿಯೇ ಸಂಭವಿಸಿದೆ.
ಪ್ರೇಮಸಾಗರ್ ಕಳೆದ ಐದು ವರ್ಷಗಳಿಂದ ದುಬೈನಲ್ಲಿ ಇದ್ದರು. ಏಪ್ರಿಲ್ 11ರಂದು ದಾಳಿ ನಡೆದಿದ್ದು, ಅವರ ಕತ್ತಿಗೆ ಕತ್ತಿಯಿಂದ ಇರಿದು ಕೊಲೆ ಮಾಡಲಾಗಿದೆ. ಪ್ರೇಮಸಾಗರ್ ಪತ್ನಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಕುಟುಂಬಸ್ಥರು ಸರ್ಕಾರದ ನೆರವು ಬೇಕೆಂದು ವಿನಂತಿಸಿದ್ದಾರೆ. ಆತನ ಚಿಕ್ಕಪ್ಪ ಪೋಶೆಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವ ಕಿಶನ್ ರೆಡ್ಡಿ ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ಮೃತರ ಶವಗಳನ್ನು ತ್ವರಿತವಾಗಿ ಭಾರತಕ್ಕೆ ತರಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ರೆಡ್ಡಿ, “ಮೃತರ ಕುಟುಂಬಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ” ಎಂದು ತಿಳಿಸಿದ್ದಾರೆ.