Chikkamagaluru: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ (Baba Budan Swami Dargah) ಮತ್ತೆ ಚರ್ಚೆಗೆ ಬಂದಿದೆ. ಹಿಂದೂ ಸಂಘಟನೆಗಳು ಎಸ್ಐಟಿ ರಚಿಸಿ ಉತ್ಖನನ ನಡೆಸುವಂತೆ ಹಾಗೂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಲು ಸರ್ಕಾರವನ್ನು ಒತ್ತಾಯಿಸುತ್ತಿವೆ.
ದತ್ತಪೀಠವು ಹಿಂದೂ ಧರ್ಮಸ್ಥಳವಾಗಿದ್ದು, ದತ್ತಾತ್ರೇಯ ಸ್ವಾಮಿ ತಪಸ್ಸು ಮಾಡಿದ ಸ್ಥಳ ಎಂದು ಸಂಘಟನೆಗಳು ಹೇಳುತ್ತಿವೆ. ನಕಲಿ ಗೋರಿಗಳನ್ನು ತೆರವುಗೊಳಿಸಿ ಸತ್ಯ ಬಹಿರಂಗಗೊಳಿಸಲು ಜಿಪಿಎಸ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.
2017ರ ಡಿಸೆಂಬರ್ 3ರಂದು ದತ್ತ ಜಯಂತಿ ದಿನ ದರ್ಗಾ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಿದ ಪ್ರಕರಣ ದಾಖಲಾಗಿತ್ತು. ಇದರಲ್ಲಿ 14 ಕಾರ್ಯಕರ್ತರ ವಿರುದ್ಧ ಪೊಲೀಸ್ ಪ್ರಕರಣವಿತ್ತು.
ದರ್ಗಾದ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ ಮಾಡಿದರೆಂದು ಮುಸ್ಲಿಂ ಮುಖಂಡರು ಆರೋಪಿಸಿದ್ದರು. ಇದನ್ನು ಖಂಡಿಸಿ ಶಾಖಾದ್ರಿ ಕುಟುಂಬಸ್ಥರು ದರ್ಗಾ ಎದುರು ಪ್ರತಿಭಟನೆ ನಡೆಸಿದ್ದರು. ಈ ವಿಷಯದಲ್ಲಿ ಶಾಖಾದ್ರಿ ಕುಟುಂಬಸ್ಥರು ಮತ್ತು ಮುಜರಾಯಿ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಯಿತು. ಮುಸ್ಲಿಂ ಮುಖಂಡರು ಈ ಕುರಿತು ಪೊಲೀಸ್ ದೂರು ಕೂಡ ದಾಖಲಿಸಿದ್ದರು.