Home Chikkaballapura Bagepalli ಡಿ. 12ರಿಂದ ಹೆಲ್ಮೆಟ್ ಕಡ್ಡಾಯ ಜಾರಿ, ಇಂದಿನಿಂದಲೇ ₹500 ದಂಡ!

ಡಿ. 12ರಿಂದ ಹೆಲ್ಮೆಟ್ ಕಡ್ಡಾಯ ಜಾರಿ, ಇಂದಿನಿಂದಲೇ ₹500 ದಂಡ!

27

Bagepalli, Chikkaballapur : ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಪ್ರಾಣಹಾನಿಯನ್ನು ತಡೆಯಲು ಜಿಲ್ಲಾ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಡಿಸೆಂಬರ್ 12 ರಿಂದ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಈ ಆದೇಶ ಜಾರಿಗೆ ಬರುವ ಮುನ್ನವೇ, ಮುಖ್ಯ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಎಚ್ಚರಿಕೆಯ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

ಇಂದಿನಿಂದಲೇ ದಂಡ

ಸೋಮವಾರ ಪಟ್ಟಣದ ಮುಖ್ಯರಸ್ತೆಯ ತಾಲ್ಲೂಕು ಕಚೇರಿಯ ಮುಂದೆ ಪೊಲೀಸರು ವಿಶೇಷ ತಪಾಸಣೆ ನಡೆಸಿದರು. ಈ ವೇಳೆ, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದವರನ್ನು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸುತ್ತಿದ್ದವರನ್ನು ಮತ್ತು ತ್ರಿಬಲ್ ರೈಡಿಂಗ್ ಮಾಡುತ್ತಿದ್ದವರನ್ನು ತಡೆದು ಎಚ್ಚರಿಕೆ ನೀಡಲಾಯಿತು.

ನಿಯಮ ಉಲ್ಲಂಘಿಸಿದ ವಾಹನ ಸವಾರರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಪ್ರತಿಯೊಬ್ಬರಿಗೆ ತಲಾ ₹500 ದಂಡ ವಿಧಿಸಿ, ನಂತರ ವಾಹನಗಳನ್ನು ಬಿಟ್ಟು ಕಳುಹಿಸಿದರು.

ಜೀವ ಉಳಿಸಲು ಹೆಲ್ಮೆಟ್ ಅನಿವಾರ್ಯ

ಈ ಕುರಿತು ಮಾತನಾಡಿದ ಸಬ್ ಇನ್‌ಸ್ಪೆಕ್ಟರ್ ಸುನೀಲ್, “ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸುವುದರಿಂದ ನಿಮ್ಮ ಅಮೂಲ್ಯವಾದ ಜೀವ ಮತ್ತು ನಿಮ್ಮ ಕುಟುಂಬದ ಜೀವನ ಎರಡನ್ನೂ ಉಳಿಸಬಹುದು. ಪ್ರಾಣಾಪಾಯಗಳು ತಪ್ಪುತ್ತವೆ” ಎಂದು ತಿಳಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ ಮಾತನಾಡಿ, “ಡಿಸೆಂಬರ್ 12 ರಂದು ಹೆಲ್ಮೆಟ್ ಧರಿಸುವ ಬಗ್ಗೆ ಪ್ರಚಾರ ಮಾಡಿ, ಅದನ್ನು ಕಡ್ಡಾಯ ಮಾಡಲಾಗುವುದು. ಆ ದಿನಾಂಕದ ನಂತರವೂ ಹೆಲ್ಮೆಟ್ ಧರಿಸದ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.

ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಸಬ್ ಇನ್‌ಸ್ಪೆಕ್ಟರ್ ಸುನೀಲ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಕೆ.ಶ್ರೀನಿವಾಸ್, ಆನಂದ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ಮಧುಸೂದನ್ ಮತ್ತು ಗೃಹರಕ್ಷಕ ದಳದ ಕೃಷ್ಣಪ್ಪ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

For Daily Updates WhatsApp ‘HI’ to 7406303366

The post ಡಿ. 12ರಿಂದ ಹೆಲ್ಮೆಟ್ ಕಡ್ಡಾಯ ಜಾರಿ, ಇಂದಿನಿಂದಲೇ ₹500 ದಂಡ! appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.

NO COMMENTS

LEAVE A REPLY

Please enter your comment!
Please enter your name here

You cannot copy content of this page