ಬಳ್ಳಾರಿ ನಗರದ ರಾಯಲ್ ವೃತ್ತದಲ್ಲಿ 7 ಕೋಟಿ ರೂಪಾಯಿ ವೆಚ್ಚದಲ್ಲಿ 108 ಅಡಿ ಎತ್ತರದ ವಾಚ್ ಟವರ್ (Watch Tower) ನಿರ್ಮಾಣವಾಗಿದ್ದು, ಉದ್ಘಾಟನೆ ಹಂತಕ್ಕೆ ಬಂದಿದೆ. ಆದರೆ ಈ ವಾಚ್ ಟವರ್ ಬಗ್ಗೆ ರಾಜಕೀಯ ನಾಯಕರಲ್ಲಿ ವಾಗ್ವಾದ ನಡೆದಿದೆ.
ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿರುವಂತೆ, “ನಾವು ಮತ್ತೆ ಅಧಿಕಾರಕ್ಕೆ ಬಂದರೆ, ಈ ಟವರ್ ಅನ್ನು ಒಡೆದು ಹಾಕಿ ಹೊಸ ಮಾದರಿಯಲ್ಲಿ ಪುನರ್ನಿಮಾಣ ಮಾಡುತ್ತೇವೆ.” ಅವರು ಈ ಟವರ್ ಶೇಪ್ಲೆಸ್ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ, “ಬಿಜೆಪಿಯವರದ್ದು ಬರೀ ಕೆಡಿಸುವ ಕೆಲಸ. ನಾವು ಕಾಂಗ್ರೆಸ್ ಪಕ್ಷದವರು ಅಭಿವೃದ್ಧಿಗೆ ಬದ್ಧರಾಗಿದ್ದೇವೆ. ಈ ಟವರ್ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ. ಇದನ್ನು ರಾಜಕೀಯ ಕಾರಣಕ್ಕಾಗಿ ಒಡೆದು ಹಾಕುವುದು ಸರಿಯಲ್ಲ,” ಎಂದು ತಿರುಗೇಟು ನೀಡಿದ್ದಾರೆ.
2023ರಲ್ಲಿ ಶ್ರೀರಾಮುಲು ಉಸ್ತುವಾರಿ ಸಚಿವರಾಗಿದ್ದಾಗಲೇ ಹಳೆಯ ಕ್ಲಾಕ್ ಟವರ್‌ನ್ನು ತೆಗೆದುಹಾಕಿ ಹೊಸದಾಗಿ ನಿರ್ಮಿಸಲು ಯೋಜನೆ ರೂಪಿಸಿದ್ದರು. ಆದರೆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಭರತ್ ರೆಡ್ಡಿ ಅವರು ಶಾಸಕನಾಗಿ ಬಳ್ಳಾರಿಗೆ ಅನುದಾನ ತಂದು ಈ ವಾಚ್ ಟವರ್ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ್ದಾರೆ.
ಶ್ರೀರಾಮುಲು ಇಚ್ಛಿಸಿದ್ದ ಮಾದರಿ ಮತ್ತು ಪ್ರಸ್ತುತ ನಿರ್ಮಿತ ಟವರ್ ಮಧ್ಯೆ ವ್ಯತ್ಯಾಸವಿದೆ. ಅವರು “ಇದು ಲಿಬಿಲಾನ್ ಮಾದರಿಯಲ್ಲಿ ಆಗಬೇಕಿತ್ತು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಭರತ್ ರೆಡ್ಡಿ, “ನಮ್ಮ ದೇಶದ ಮಾದರಿ ಸಾಕು. ವಿದೇಶಿ ಮಾದರಿ ಬೇಕಾಗಿಲ್ಲ. ಟವರ್ ಮೇಲೆ ನಾಲ್ಕು ಮುಖದ ಸಿಂಹದ ಲಾಂಛನ ಇದೆ, ಅದನ್ನು ತೆಗೆದು ಹಾಕಲು ಬಿಡಲ್ಲ,” ಎಂದಿದ್ದಾರೆ.
ಬಳ್ಳಾರಿಯಲ್ಲಿ ನಡೆಯುತ್ತಿರುವ ಈ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ರಾಜಕೀಯ ಚರ್ಚೆ ನಡೆಯುತ್ತಿದೆ. ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಬದಿಗೆ ನಿಲ್ಲಿಸಿ, ಶ್ರೇಷ್ಠ ಬಳ್ಳಾರಿಗೆ ಕೈಜೋಡಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.