ಬೆಂಗಳೂರು ನಗರದಲ್ಲಿ ಎಲ್ಲೆಡೆ ಗುಂಡಿಗಳು. (Bangalore Road Problem) ವಾಹನ ಸವಾರರು ಜೀವಪಣಕ್ಕಿಟ್ಟು ಸಂಚರಿಸುವ ಸ್ಥಿತಿ. ‘ಟಿವಿ9’ ನಡೆಸಿದ ‘ಏನ್ ರೋಡ್ ಗುರೂ’ ಅಭಿಯಾನ ಈ ಸಮಸ್ಯೆಯನ್ನು ಹೊರತಂದಿದೆ. ಇದರಿಂದ ಸರ್ಕಾರ ಕ್ರಮಕೈಗೊಳ್ಳುವಂತಾಗಿದೆ.
ಉಪ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಸೋಮವಾರ ರಾತ್ರಿ ರಸ್ತೆಯ ಗುಂಡಿಗಳನ್ನು ಪರಿಶೀಲಿಸಿದರು. ಮಧ್ಯರಾತ್ರಿ 12ರಿಂದ ಬೆಳಗಿನ 1.30ರವರೆಗೆ ಸುಮಾರು 80 ಕಿ.ಮೀ. ರಸ್ತೆ ತಪಾಸಣೆ ನಡೆಸಿದರು. ಅವರ ಜೊತೆ ಬಿಬಿಎಂಪಿ ಆಯುಕ್ತ ಮಹೇಶ್ವರ್ ರಾವ್ ಹಾಜರಿದ್ದರು.
ಯಲಹಂಕದ ಅಟ್ಟೂರು ಮತ್ತು ಬಾಗಲೂರು ಮುಖ್ಯರಸ್ತೆಗಳಲ್ಲಿ ನಡೆಯುತ್ತಿದ್ದ ಗುಂಡಿಮುಚ್ಚುವ ಕೆಲಸವನ್ನು ಸ್ವತಃ ವೀಕ್ಷಿಸಿದರು. ಡಾಂಬರು ಹಾಕುವ ಯಂತ್ರದ ಮೇಲೇರಿಯೂ ಪರಿಶೀಲನೆ ನಡೆಸಿದರು.
ಡಿಕೆಶಿ, “ಯಾವೇ ರಸ್ತೆ ಗುಂಡಿ ಕಂಡರೂ ‘ಫಿಟ್ ಮೈ ಸ್ಟ್ರೀಟ್’ ಆಪ್ ಮೂಲಕ ಮಾಹಿತಿ ನೀಡಿದರೆ ಅಧಿಕಾರಿಗಳು ತಕ್ಷಣ ಮುಚ್ಚುತ್ತಾರೆ” ಎಂದು ಭರವಸೆ ನೀಡಿದರು. ಶಾಶ್ವತ ಪರಿಹಾರಕ್ಕಾಗಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡಲಾಗುತ್ತದೆ ಎಂದರು.
ಈಜಿಪುರ ಮೇಲ್ಸೇತುವೆಯ ಸ್ಲ್ಯಾಬ್ ಕುಸಿದು ಅಪಘಾತ ಸಂಭವಿಸಿದ ಸ್ಥಳಕ್ಕೂ ತೆರಳಿ ಪರಿಶೀಲಿಸಿದರು.
‘ಏನ್ ರೋಡ್ ಗುರೂ’ ಅಭಿಯಾನದ ಒತ್ತಡದಿಂದ ಕೊನೆಗೂ ಸರ್ಕಾರ ಎಚ್ಚೆತ್ತುಕೊಂಡಿದೆ. ಬೆಂಗಳೂರು ನಗರದಲ್ಲಿನ 4,400 ರಸ್ತೆ ಗುಂಡಿಗಳನ್ನು ಮುಚ್ಚುವ ಆದೇಶ ಸರ್ಕಾರ ನೀಡಿದೆ.