Dhaka: ಬಾಂಗ್ಲಾದೇಶದ (Bangladesh) ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಭಾರತ ಚಿಂತಿಸುವ ಅಗತ್ಯವಿಲ್ಲ ಎಂದು ಬಾಂಗ್ಲಾದ ವಿದೇಶಾಂಗ ಸಲಹೆಗಾರ ಎಂ.ಡಿ. ತೌಹಿದ್ ಹುಸೇನ್ ಹೇಳಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಅವರು “ಇದು ಬಾಂಗ್ಲಾದೇಶದ ಆಂತರಿಕ ವಿಷಯ, ನಾವು ಇದನ್ನು ನೋಡಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಜೈಶಂಕರ್ ಅವರು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಕ್ಕೆ ತೌಹಿದ್ ಪ್ರತಿಕ್ರಿಯೆ ನೀಡಿದ್ದಾರೆ. “ಭಾರತ ತನ್ನ ದೇಶದ ಅಲ್ಪಸಂಖ್ಯಾತರನ್ನು ಹೇಗೆ ರಕ್ಷಿಸಬೇಕು ಎಂಬುದರ ಬಗ್ಗೆ ಗಮನಹರಿಸಲಿ. ಬಾಂಗ್ಲಾದೇಶದ ಒಳನೀತಿಯಲ್ಲಿ ಹಸ್ತಕ್ಷೇಪ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಬಾಂಗ್ಲಾದೇಶ ತನ್ನ ನಿಲುವನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿದೆ. ಆದರೆ ಭಾರತವು ಬಾಂಗ್ಲಾದೇಶದೊಂದಿಗೆ ಯಾವ ರೀತಿಯ ಸಂಬಂಧವನ್ನು ಬಯಸುತ್ತದೆ ಎಂಬುದನ್ನು ಸಹ ನಿರ್ಧರಿಸಬೇಕಾಗಿದೆ ಎಂದಿರುವ ತೌಹಿದ್ ಹುಸೇನ್ ಭಾರತದೊಂದಿಗಿನ ಸಂಬಂಧದ ಬಗ್ಗೆ ಬಾಂಗ್ಲಾದೇಶದ ಸ್ಪಷ್ಟ ನಿಲುವನ್ನು ಒತ್ತಿ ಹೇಳಿದರು. “ನಾವು ಪರಸ್ಪರ ಗೌರವದ ಮೇಲೆ ನಿರ್ಮಿಸಲಾದ ಸಂಬಂಧವನ್ನು ಬಯಸುತ್ತೇವೆ. ನಮಗೆ ಈ ವಿಚಾರದಲ್ಲಿ ಯಾವುದೇ ಅಸ್ಪಷ್ಟತೆಯಿಲ್ಲ” ಎಂದು ಅವರು ತಿಳಿಸಿದ್ದಾರೆ.