Bengaluru: ಕರ್ನಾಟಕ BJP ಯಲ್ಲಿ ಮತ್ತೆ ಬಣಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿ.ವೈ ವಿಜಯೇಂದ್ರ (Basanagouda Patil Yatnal and B.Y. Vijayendra) ಬಣಗಳು ಇದುವರೆಗೆ ತಾವು ತಾವೇ ಶಕ್ತಿ ಪ್ರದರ್ಶನ ಮಾಡುತ್ತಾ ಬಂದಿದ್ದರೆ, ಈಗ ಜಾತಿ, ಸಮುದಾಯ, ಧರ್ಮದ ಹೆಸರಿನಲ್ಲಿ ಮುಖಾಮುಖಿಯಾಗಿ ನಿಂತಿವೆ.
ವಿಜಯೇಂದ್ರ ಬಣವು ಮಾರ್ಚ್ 15ರೊಳಗೆ ರಾಜ್ಯಾದ್ಯಂತ ವೀರಶೈವ ಲಿಂಗಾಯತ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಂಡರೆ, ಇದಕ್ಕೆ ತಿರುಗೇಟಾಗಿ ಯತ್ನಾಳ್ ಬಣ ಹಿಂದೂ ಸಮಾವೇಶ ನಡೆಸುವುದಾಗಿ ಘೋಷಿಸಿದೆ. ಇದರಿಂದಾಗಿ ಇಬ್ಬರ ನಡುವಿನ ರಾಜಕೀಯ ಪ್ರತಿಸ್ಪರ್ಧೆ ಮತ್ತಷ್ಟು ತೀವ್ರವಾಗುತ್ತಿದೆ.
ಬಿಎಸ್ ಯಡಿಯೂರಪ್ಪ ಅವರ ಹೆಸರಿನಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದ ಎಂಪಿ ರೇಣುಕಾಚಾರ್ಯಗೆ ವಿಜಯೇಂದ್ರ ತಡೆಯೊಡ್ಡಿದ್ದಾರೆ. ಯಾವುದೇ ಸಮಾವೇಶ ನಡೆಸದಂತೆ ಸೂಚನೆ ನೀಡಿದರಾದರೂ, ಯತ್ನಾಳ್ ಬಣದವರು ಮೇ 15ರೊಳಗೆ ಸಮಾವೇಶ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ರೇಣುಕಾಚಾರ್ಯ ಹೇಳಿಕೆ ನೀಡಿದ್ದು, ದಾವಣಗೆರೆಯಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಕನಿಷ್ಠ 5 ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಯತ್ನಾಳ್ ಬಣವು ವಿಜಯೇಂದ್ರ ಬಣದ ಸವಾಲಿಗೆ ತಕ್ಕ ಪ್ರತಿಸವಾಲು ನೀಡಿದ್ದು, ವಿಜಯೇಂದ್ರ ಸಮಾವೇಶ ಮುಗಿದೊಡನೆ ತಮ್ಮ ಸಮಾವೇಶ ನಡೆಸುವುದಾಗಿ ಘೋಷಿಸಿದ್ದಾರೆ. ಇದನ್ನು ಬೆಂಬಲಿಸಿ ಶಾಸಕ ಬಿಪಿ ಹರೀಶ್ ಕೂಡ ಹಿಂದೂ ಸಮಾವೇಶದ ಪ್ರಸ್ತಾವನೆ ಮುಂದಿಟ್ಟಿದ್ದಾರೆ.
ಈ ರಾಜಕೀಯ ಪೈಪೋಟಿಯಿಂದ ಬಿಜೆಪಿ ಒಳಗಿನ ಭಿನ್ನತೆ ಮತ್ತಷ್ಟು ಎದ್ದು ಕಾಣುತ್ತಿದ್ದು, ಹೈಕಮಾಂಡ್ ಮಾತ್ರ ಇದನ್ನು ನೋಡಿ ಮೌನವಾಗಿರುವುದು ಕುತೂಹಲ ಮೂಡಿಸಿದೆ.