Bengaluru, Bangalore : ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ಸೋಮವಾರ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಆಯುಕ್ತರು ” ‘Fix My Street’ ಆ್ಯಪ್ ಮೂಲಕ BBMP ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ರಸ್ತೆ ಗುಂಡಿಗಳಿವೆ ಎಂಬುದನ್ನು ತ್ವರಿತಗತಿಯಲ್ಲಿ ಸಮೀಕ್ಷೆ ನಡೆಸಿ ಅವುಗಳನ್ನು ಮುಚ್ಚಬೇಕು. ಸಹಾಯಕ ಕಂದಾಯ ಅಧಿಕಾರಿಗಳು ಯಾವ ರಸ್ತೆಯಲ್ಲಿ ಗುಂಡಿಗಳಿವೆ, ಎಷ್ಟು ಗುಂಡಿಗಳಿವೆ ಎಂಬುದನ್ನು ಭೌಗೋಳಿಕ ಸ್ಥಳದ ಮಾಹಿತಿ ಹಾಗೂ ಛಾಯಾಚಿತ್ರಗಳ ಸಮೇತ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‌ನಲ್ಲಿ ಅಪ್ಲೋಡ್ ಮಾಡಬೇಕು. ಇದರ ಆಧಾರದಲ್ಲಿ ಡಾಂಬರು ಮಿಶ್ರಣ ಘಟಕದಿಂದ ಸ್ಥಳೀಯ ಎಂಜಿನಿಯರ್‌ಗಳು ಡಾಂಬರು ಪಡೆದುಕೊಳ್ಳಬೇಕು. ನಿಯಮಾನುಸಾರ ಗುಂಡಿಯ ಅಂಚುಗಳನ್ನು ಚೌಕ ಅಥವಾ ಆಯತಾಕಾರದಲ್ಲಿ ಕತ್ತಿರಿಸಿ ಡಾಂಬರು ಮಿಶ್ರಣ ಹಾಕಿ ಮುಚ್ಚಬೇಕು. ಪೈಥಾನ್ ಯಂತ್ರ ಬಳಸಿ 182 ಕಿ.ಮೀ ಉದ್ದದ ಮುಖ್ಯ ರಸ್ತೆಗಳು ಹಾಗೂ ಉಪಮುಖ್ಯ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು. ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಬೇಕಿರುವ ರಸ್ತೆಗಳಲ್ಲೂ ಗುಂಡಿಗಳನ್ನು ಮುಚ್ಚಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ‘ಫಿಕ್ಸ್ ಮೈ ಆ್ಯಪ್’ನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವುದನ್ನು ನಾಗರಿಕರು ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಬೇಕು ” ಎಂದು ತಿಳಿಸಿದರು.
ಸಭೆಯಲ್ಲಿ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಪಿ.ಎನ್.ರವೀಂದ್ರ, ಇಂಜಿನಿಯರ್ ವಿಭಾಗದ ಮುಖ್ಯಸ್ಥರಾದ ವಿಶ್ವನಾಥ್, ಎಲ್ಲಾ ವಲಯ ಮುಖ್ಯ ಇಂಜಿನಿಯರ್ ಗಳು, ಕಾರ್ಯಪಾಲಕ ಇಂಜಿನಿಯರ್ ಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.