Bengaluru: ಬೆಂಗಳೂರು ಮತ್ತು ಚೆನ್ನೈ ನಡುವಿನ ಸಂಪರ್ಕ ಸುಗಮಗೊಳಿಸುವ ಮಹತ್ವಾಕಾಂಕ್ಷಿ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ವೇ (Bengaluru-Chennai Expressway) ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ. ಈ ಹೆದ್ದಾರಿಯನ್ನು 2025ರ ಆಗಸ್ಟ್ ವೇಳೆಗೆ ಪೂರ್ಣಗೊಳಿಸುವ ಗಡುವು ನಿಗದಿಯಾಗಿತ್ತು. ಆದರೆ ಈಗ 2026ರ ಜೂನ್ ವೇಳೆಗೆ ಮಾತ್ರ ಸಂಪೂರ್ಣ ನಿರ್ಮಾಣ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ.
262 ಕಿ.ಮೀ ಉದ್ದದ ಈ Expressway ಯ ಕೇವಲ 71 ಕಿ.ಮೀ. ಭಾಗದ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಕರ್ನಾಟಕದ ಭಾಗದಲ್ಲಿ ಕಾಮಗಾರಿ ಮುಕ್ತಾಯಗೊಂಡಿದ್ದು, ಅಲ್ಲಿನ ಹೆದ್ದಾರಿಯನ್ನು ಅಣಿಮಾಡಲಾಗಿದೆ. ಆದರೆ, ಆಂಧ್ರಪ್ರದೇಶ ಮತ್ತು ತಮಿಳುನಾಡು ಭಾಗದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ.
ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಉಳಿದ ಕಾಮಗಾರಿ 2026ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Greenfield Expressway ವಿಶೇಷತೆ
- ಇದು ದಕ್ಷಿಣ ಭಾರತದ ಮೊದಲ Greenfield Expressway ಆಗಿದ್ದು, ₹17,900 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ.
- ಈ ಹೆದ್ದಾರಿ ಬೆಂಗಳೂರು-ಚೆನ್ನೈ ಪ್ರಯಾಣದ ಅವಧಿಯನ್ನು 7 ಗಂಟೆಗಳಿಂದ 3 ಗಂಟೆಗೆ ಕಡಿತಗೊಳಿಸಲು ಸಹಾಯಕವಾಗಲಿದೆ.
- ಗಂಟೆಗೆ ಗರಿಷ್ಠ 120 ಕಿ.ಮೀ. ವೇಗದಲ್ಲಿ ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ.
- ಇದು ಆಂಧ್ರಪ್ರದೇಶ ಮತ್ತು ತಮಿಳುನಾಡು ಹಾದು ಚೆನ್ನೈನ ಶ್ರೀಪೆರಂಬುದೂರು ತಲುಪುತ್ತದೆ.
ಈ ಯೋಜನೆಯ ಪೂರ್ಣಗೊಳಿಕೆಯಿಂದ ಬೆಂಗಳೂರು-ಚೆನ್ನೈ ನಡುವಿನ ಸಂಚಾರ ಸುಗಮಗೊಳ್ಳಲಿದ್ದು, ದಕ್ಷಿಣ ಭಾರತದ ಮೂಲಸೌಕರ್ಯದಲ್ಲಿ ದೊಡ್ಡ ಬದಲಾವಣೆ ತರಲಿದೆ.








