Bengaluru: ಸಂಗೊಳ್ಳಿ ರಾಯಣ್ಣ ಮೆಜೆಸ್ಟಿಕ್ ರೈಲು ನಿಲ್ದಾಣವನ್ನು ಏರ್ಪೋರ್ಟ್ ಮಾದರಿಯಲ್ಲಿ 1500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಸೋಮವಾರ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೆಜೆಸ್ಟಿಕ್ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದ ಡಿಪಿಆರ್ (ವ್ಯವಸ್ಥಿತ ಯೋಜನೆ) ಸಿದ್ಧವಾಗಿದೆ. ರೈಲ್ವೆ ಮಂಡಳಿಯಿಂದ ಕೆಲವು ಸ್ಪಷ್ಟನೆಗಳನ್ನು ಕೇಳಲಾಗಿದೆ, ಮತ್ತು ಅವುಗಳನ್ನು ಮುಂದಿನ ದಿನಗಳಲ್ಲಿ ಮಂಡಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. “ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಯೋಜನೆಗಳಿಗೆ ಎಂದಿಗೂ ತಡೆಹಿಡಿಯುವುದಿಲ್ಲ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಚರ್ಚೆ ನಡೆಸಿ ಕೆಲಸವನ್ನು ಶೀಘ್ರ ಆರಂಭಿಸಲಾಗುವುದು,” ಎಂದು ಹೇಳಿದರು.
ಮಹತ್ವಾಕಾಂಕ್ಷಿ ಯೋಜನೆಗಳು
ಮಜೆಸ್ಟಿಕ್ ನಿಲ್ದಾಣವನ್ನು ಏರ್ಪೋರ್ಟ್ ಮಾದರಿಯಲ್ಲಿಯೇ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತದೆ. 160 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ಈ ನಿಲ್ದಾಣ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಸಚಿವರು ಹೇಳಿದರು.
ಪ್ರಧಾನಿ ಮೋದಿ ಶ್ಲಾಘನೆ
ಪ್ರಧಾನಿ ಮೋದಿ ಅವರ ಪ್ರೋತ್ಸಾಹದಿಂದ ಹೊಸ ವಿನೂತನ ಯೋಜನೆಗಳು ಯಶಸ್ವಿಯಾಗಿ ಅಳವಡಿಕೆಯಾಗಿ, ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದು ಸೋಮಣ್ಣ ಪ್ರಶಂಸಿಸಿದರು.
ರಾಜಕೀಯ ಆರೋಪಗಳ ಬಗ್ಗೆ ಪ್ರತಿಕ್ರಿಯೆ
ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ₹100 ಕೋಟಿ ಆಫರ್ ನೀಡಲಾಗಿದೆ ಎಂಬ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರ ಆರೋಪದ ಬಗ್ಗೆ ಮಾತನಾಡಿದ ಸಚಿವರು, “ಅವರು ಶಾಸಕರಾಗಿ ಉತ್ತಮ ಕೆಲಸ ಮಾಡಲಿ. ಈ ರೀತಿಯ ಆರೋಪಗಳು ಅವರ ಗೌರವಕ್ಕೆ ತಕ್ಕದಿಲ್ಲ. ಶೇ.40 ಕಮಿಷನ್ ಆರೋಪ ಮಾಡಿರುವಂತೆಯೇ ಇದೂ ಇನ್ನೊಂದು ಆರೋಪ ಮಾತ್ರ,” ಎಂದು ವ್ಯಂಗ್ಯವಾಡಿದರು.
ಬಿಪಿಎಲ್ ಕಾರ್ಡ್ ರದ್ದುಪಡಿಸುವ ನಿರ್ಧಾರ ಸಂಬಂಧ, “ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತೀರ್ಮಾನವನ್ನು ಮಾಡಬಾರದು,” ಎಂದು ಹೇಳಿದ ಸೋಮಣ್ಣ, ಕೋವಿಡ್ ಹಗರಣದ ವಿಚಾರದಲ್ಲಿ, “ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತನಿಖೆ ನಡೆಸಲು ಬಿಡಿ,” ಎಂದರು.