Ahmedabad: ಗುಜರಾತ್ ಸರ್ಕಾರದಲ್ಲಿ (Gujarat government) ದೊಡ್ಡ ಬದಲಾವಣೆಯ ಹಂತ ಶುರುವಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಹೊರತುಪಡಿಸಿ, ಎಲ್ಲ ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಸಚಿವರು ರಾಜೀನಾಮೆ ಪತ್ರವನ್ನು ನೇರವಾಗಿ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಸಲ್ಲಿಸಿದ್ದಾರೆ.
ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಚಿವರು ತಮ್ಮ ಸ್ಥಾನ ತೊರೆದಿದ್ದಾರೆ. ಈಗ ಪಟೇಲ್ ಅವರ ಸರ್ಕಾರದಲ್ಲಿ ಒಟ್ಟು 16 ಸಚಿವರು ಇದ್ದು, ಹೊಸವರನ್ನು ಸೇರಿಸಿ ಸಂಪುಟ ಪುನರ್ರಚನೆ ಮಾಡುವ ಸಾಧ್ಯತೆ ಇದೆ. ಹಿರಿಯ ಬಿಜೆಪಿ ನಾಯಕರ ಪ್ರಕಾರ, 10 ಹೊಸ ಮುಖಗಳು ಸಚಿವರಾಗುವ ಸಾಧ್ಯತೆ ಇದೆ.
ಪ್ರಸ್ತುತ ಸಚಿವರಲ್ಲಿ ಅರ್ಧದಷ್ಟು ಮಂದಿಯನ್ನು ಕೈಬಿಡುವ ಸಾಧ್ಯತೆ ಇದೆ. ಕೆಲವರು ಮಾತ್ರ ಮರು ನೇಮಕವಾಗಬಹುದು. ಹೊಸ ಸಚಿವರ ಪಟ್ಟಿ ಇನ್ನೂ ಸ್ಪಷ್ಟವಾಗಿಲ್ಲ.
ಹೊಸ ಸಚಿವರಿಗೆ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ.
ಸಂಪುಟ ಬದಲಾವಣೆಯ ನಿರೀಕ್ಷೆಯಿಂದ ಅಕ್ಟೋಬರ್ 15ರ ಸಂಪುಟ ಸಭೆ ರದ್ದುಗೊಂಡಿತ್ತು. ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗುಜರಾತ್ಗೆ ಬಂದು, ಸಿಎಂ ಪಟೇಲ್, ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಸಿ.ಆರ್. ಪಾಟೀಲ್ ಮತ್ತು ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.
ಗುಜರಾತ್ ಸಚಿವ ಸಂಪುಟ ಬದಲಾವಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆದಿತ್ತು. ಗೃಹ ಸಚಿವ ಅಮಿತ್ ಶಾ, ಸಿ.ಆರ್. ಪಾಟೀಲ್ ಮತ್ತು ಸಿಎಂ ಪಟೇಲ್ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.
2027ರ ವಿಧಾನಸಭೆ ಚುನಾವಣೆಗೆ ಮುನ್ನ ಸರ್ಕಾರ ಮತ್ತು ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಈ ಪುನರ್ರಚನೆ ನಡೆಯುತ್ತಿದೆ. ಇತ್ತೀಚೆಗೆ ಜಗದೀಶ್ ವಿಶ್ವಕರ್ಮ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಆಪ್ ಪಕ್ಷದ ಬೆಳವಣಿಗೆಯನ್ನು ತಡೆಯಲು, ಬಿಜೆಪಿ ಹೊಸ ಸಮೀಕರಣಗಳತ್ತ ಗಮನ ಹರಿಸಿದೆ.
For Daily Updates WhatsApp ‘HI’ to 7406303366
ಗುಜರಾತ್ ವಿಧಾನಸಭೆಯಲ್ಲಿ ಒಟ್ಟು 182 ಸದಸ್ಯರು ಇದ್ದು, ಕಾನೂನಿನ ಪ್ರಕಾರ ಸರ್ಕಾರಕ್ಕೆ ಗರಿಷ್ಠ 27 ಮಂದಿ ಸಚಿವರನ್ನು ಹೊಂದಲು ಅವಕಾಶವಿದೆ.







