Patna (Bihar): ಬಿಹಾರ ವಿಧಾನಸಭಾ ಚುನಾವಣೆ ಮುಂದೆ ಇರುವಾಗ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಜನತೆಗೆ ಒಂದಾದಮೇಲೊಂದು ಸೌಲಭ್ಯಗಳ ಘೋಷಣೆ ಮಾಡುತ್ತಿದೆ. ಇದೀಗ, ರಾಜ್ಯದ (Bihar government) ಆಶಾ ಮತ್ತು ಮಮತಾ (ASHA, Mamata) ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಲಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶದಂತೆ, ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹1,000 ರಿಂದ ₹3,000ಕ್ಕೆ ಹೆಚ್ಚಿಸಲಾಗಿದೆ. ಮಮತಾ ಆರೋಗ್ಯ ಕಾರ್ಯಕರ್ತೆಯರಿಗೆ ಈಗಿನ ₹300 ಬದಲಿಗೆ ಪ್ರತಿ ಹೆರಿಗೆಗೆ ₹600 ರೂ. ನೀಡಲಾಗುವುದು.
ಈ ಬಗ್ಗೆ ನಿತೀಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “2005ರಲ್ಲಿ ನಮ್ಮ ಸರ್ಕಾರ ಬಂದಾಗಿನಿಂದ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದೇವೆ. ಗ್ರಾಮೀಣ ಭಾಗದ ಆರೋಗ್ಯ ಸೇವೆಯಲ್ಲಿ ಆಶಾ ಮತ್ತು ಮಮತಾ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ಗೌರವ ಸೂಚಿಸಲು ಈ ನಿರ್ಧಾರ ಕೈಗೊಂಡಿದ್ದೇವೆ,” ಎಂದು ತಿಳಿಸಿದ್ದಾರೆ.
ಈ ನಿರ್ಧಾರದಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ನೀಡುವ ಮಹಿಳಾ ಕಾರ್ಯಕರ್ತೆಯರಿಗೆ ಉತ್ತೇಜನ ದೊರೆಯಲಿದೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದಲ್ಲಿ 1,000 ಜನರಿಗೆ ಒಬ್ಬರಂತೆ ನೇಮಕವಾಗಿರುತ್ತಾರೆ. ಮಮತಾ ಕಾರ್ಯಕರ್ತೆಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಸೇವೆಗಾಗಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಾರೆ.