ISLAMABAD (Pakistan): ಪಾಕಿಸ್ತಾನದಲ್ಲಿ ವಿವಾದಾತ್ಮಕ ಕಾಲುವೆ ಯೋಜನೆಗೆ ಸಂಬಂಧಿಸಿದಂತೆ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ (PPP-Pakistan People’s Party) ಅಧ್ಯಕ್ಷ ಬಿಲಾವಲ್ ಭುಟ್ಟೋ (Bilawal Bhutto) ಜರ್ದಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸದಿದ್ದರೆ, ಪಿಪಿಪಿ ಮೈತ್ರಿಕೂಟದಿಂದ ಬೆಂಬಲ ಹಿಂಪಡೆಯಲಿದೆ ಎಂದು ಅವರು ಎಚ್ಚರಿಸಿದರು.
ಸರ್ಕಾರ ಈ ಯೋಜನೆಯನ್ನು ಮುಂದುವರೆಸಿದರೆ, ಪಿಪಿಪಿಯ ಬೆಂಬಲ ಕಳೆದುಕೊಳ್ಳಬೇಕಾಗುತ್ತದೆ ಎಂದು ಭುಟ್ಟೋ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಪಾಕಿಸ್ತಾನ ಸಂಸತ್ತಿನಲ್ಲಿ ಪಿಎಂಎಲ್-ಎನ್ 79 ಸ್ಥಾನಗಳನ್ನು ಮತ್ತು ಪಿಪಿಪಿ 54 ಸ್ಥಾನಗಳನ್ನು ಹೊಂದಿದ್ದು, ಪಿಪಿಪಿಯ ಬೆಂಬಲ ಶಾಹಬಾಜ್ ಷರೀಫ್ ನೇತೃತ್ವದ ಸರ್ಕಾರಕ್ಕೆ ಬಹುಮತಕ್ಕಾಗಿ ಅತ್ಯಗತ್ಯವಾಗಿದೆ.
ಈ ಮೈತ್ರಿಕೂಟದಲ್ಲಿ ಪಿಎಂಎಲ್-ಎನ್, ಪಿಪಿಪಿ ಹಾಗೂ ಇತರ ನಾಲ್ಕು ಸಣ್ಣ ಪಕ್ಷಗಳು ಸೇರಿವೆ. ಆದರೆ, 93 ಸ್ಥಾನಗಳೊಂದಿಗೆ ಪಿಟಿಐ (ಇಮ್ರಾನ್ ಖಾನ್ ನೇತೃತ್ವದ ಪಕ್ಷ) ಪ್ರಮುಖ ವಿರೋಧ ಪಕ್ಷವಾಗಿದೆ.
ಸಿಂಧ್ ನ ಜನರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಭುಟ್ಟೋ ಮಾತನಾಡುತ್ತಾ, “ಇಸ್ಲಾಮಾಬಾದ್‌ನವರು ನಮ್ಮ ಧ್ವನಿಗೆ ಕಿವಿಗೊಡುತ್ತಿಲ್ಲ. ನಾವು ಈ ಯೋಜನೆಯನ್ನು ಖಂಡಿಸುತ್ತೇವೆ,” ಎಂದರು.
“ನಾವು ಶೆಹಬಾಜ್ ಷರೀಫ್ ಅವರನ್ನು ಎರಡೂ ಬಾರಿ ಪ್ರಧಾನಿಯಾಗಿ ಬೆಂಬಲಿಸಿದ್ದೇವೆ. ಈಗ ಅವರಿಂದ ಬೆದರಿಕೆಗಳನ್ನು ನಾವು ಅನುಭವಿಸಬೇಕೆ?” ಎಂದು ಭುಟ್ಟೋ ಪ್ರಶ್ನಿಸಿದರು.
ಚೋಲಿಸ್ತಾನ್ ಮರುಭೂಮಿಗೆ ನೀರಾವರಿ ಒದಗಿಸುವ ಉದ್ದೇಶದಿಂದ, ಸಿಂಧೂ ನದಿಯಿಂದ ನೀರು ತಿರುಗಿಸಲು ಆರು ಕಾಲುವೆಗಳನ್ನು ನಿರ್ಮಿಸುವ ಯೋಜನೆಯನ್ನು ಪಾಕಿಸ್ತಾನ ಸರ್ಕಾರ ಆರಂಭಿಸಿದೆ. ಈ ಯೋಜನೆಗೆ ಪಿಪಿಪಿಯೊಂದಿಗೆ ಹಲವಾರು ಸಿಂಧೀ ಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸುತ್ತಿವೆ.