Bengaluru: ಮಳೆಗಾಲದ ಅಧಿವೇಶನದ ಮೊದಲ ದಿನವೇ BJP ಮತ್ತು JDS ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಕಾಲ್ತುಳಿತ ಘಟನೆಗೆ ಸರ್ಕಾರವೇ ಜವಾಬ್ದಾರಿಯಾಗಿದೆ ಎಂದು ಆರೋಪಿಸಿ, ಇಂದು ಬೆಳಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಾಯಕರು ಘೋಷಣೆ ಕೂಗಿದರು.
ಬಿ.ವೈ. ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಸುರೇಶ್ ಬಾಬು ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಸರ್ಕಾರವು ರೈತರ ಹಿತದ್ರೋಹಿ, ಅಭಿವೃದ್ಧಿ ವಿರೋಧಿ ಎಂದು ಟೀಕಿಸಲಾಯಿತು. ಕಾಲ್ತುಳಿತ ಪ್ರಕರಣದಲ್ಲಿ ಅಮಾಯಕ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದು, ನಿಜವಾದ ತಪ್ಪಿತಸ್ಥರನ್ನು ರಕ್ಷಿಸಲಾಗಿದೆ ಎಂದು ಆರೋಪಿಸಿದರು.
ರಸಗೊಬ್ಬರ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದು, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಹೇಳಿದರು. ಈ ವಿಚಾರಗಳನ್ನು ಸದನದಲ್ಲಿ ಪ್ರಬಲವಾಗಿ ಪ್ರಸ್ತಾಪಿಸಿ ಹೋರಾಟ ಮುಂದುವರಿಸುವುದಾಗಿ ಪ್ರತಿಪಕ್ಷ ನಾಯಕರು ಘೋಷಿಸಿದರು.