Patna: ಬಿಜೆಪಿ ನಾಯಕ ಮತ್ತು ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾ (BJP leader Gopal Khemka) ಅವರನ್ನು ಪಾಟ್ನಾದಲ್ಲಿರುವ ಅವರ ನಿವಾಸದ ಬಳಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿದ್ದಾರೆ.
ಈ ಘಟನೆ ಗಾಂಧಿ ಮೈದಾನ ಪೊಲೀಸ್ ಠಾಣಾ ವ್ಯಾಪ್ತಿಯ ‘ಪನಾಚೆ’ ಹೋಟೆಲ್ ಬಳಿ ಸಂಭವಿಸಿದೆ. ಟ್ವಿನ್ ಟವರ್ ಅಪಾರ್ಟ್‌ಮೆಂಟ್ ಬಳಿ ವಾಸವಾಗಿದ್ದ ಖೇಮ್ಕಾ ಅವರು ಮನೆಗೆ ಹೋಗುತ್ತಿದ್ದಾಗ ಅಪರಿಚಿತರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಿಂದ ಖೇಮ್ಕಾ ಅವರು ಸ್ಥಳದಲ್ಲೇ ಸಾವಿಗೀಡಾದರು.
ಪೊಲೀಸರು ಸ್ಥಳಕ್ಕೆ ಧಾವಿಸಿ ಶೆಲ್‌ಗಳು ಹಾಗೂ ಗುಂಡುಗಳ ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ನಗರ ಎಸ್ಪಿ ದೀಕ್ಷಾ ಮಾಹಿತಿ ನೀಡಿದ್ದು, ಗೋಪಾಲ್ ಖೇಮ್ಕಾ ಅವರೇ ಗುರಿಯಾಗಿತ್ತಂತೆ. ಸದ್ಯದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಹಾಗೂ ತನಿಖೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ದಾಳಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೂರು ವರ್ಷಗಳ ಹಿಂದೆ ಖೇಮ್ಕಾ ಅವರ ಮಗ ಗುಂಜನ್ ಖೇಮ್ಕಾರನ್ನೂ ಹತ್ಯೆ ಮಾಡಲಾಗಿತ್ತು ಎಂಬುದು ಗಮನಾರ್ಹ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸ್ವತಂತ್ರ ಸಂಸದ ಪಪ್ಪು ಯಾದವ್, ಬಿಹಾರ ಸರ್ಕಾರದ ಭದ್ರತಾ ಸ್ಥಿತಿಗತಿಯನ್ನು ಟೀಕಿಸಿದ್ದು, “ಇಲ್ಲಿ ಯಾರಿಗೂ ರಕ್ಷಣೆಯಿಲ್ಲ. ಅಪರಾಧಿಗಳಿಗೆ ಬಿಹಾರ ಆಶ್ರಯವಾಗುತ್ತಿದೆ. ನಿತೀಶ್ ಕುಮಾರ್ ಸರಕಾರ ಬಿಹಾರವನ್ನು ಉಳಿಸಬೇಕಾಗಿದೆ” ಎಂದು ಹೇಳಿದ್ದಾರೆ.