ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ, ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಕಳ್ಳರು ಮನೆಗೆ ನುಗ್ಗಿದಾಗ, ಅವರನ್ನು ತಡೆಯಲು ಸೈಫ್ ಪ್ರಯತ್ನಿಸಿದ್ದು, ಈ ವೇಳೆ ದಾಳಿಗೊಳಗಾಗಿದ್ದಾರೆ. ಈ ಘಟನೆಯಿಂದ ಅವರಿಗೆ ಆರು ಕಡೆಗಳಲ್ಲಿ ಗಾಯವಾಗಿದೆ.
ಜನವರಿ 16ರ ಮುಂಜಾನೆ, ಕುಟುಂಬದೊಂದಿಗೆ ಮಲಗಿದ್ದ ಸೈಫ್ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಕಳ್ಳರನ್ನು ತಡೆಯಲು ಸೈಫ್ ಮುಂದಾದಾಗ, ಕಳ್ಳರು ಚಾಕುವಿನಿಂದ ಹಲ್ಲೆ ಮಾಡಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.
ಸೈಫ್ ಅವರನ್ನು ತಕ್ಷಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಬೆನ್ನಿನ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಮನೆಯ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
“ಕಳ್ಳರು 2-3 ಬಾರಿ ದಾಳಿ ಮಾಡಿದ್ದಾರೆ. ಆರು ಕಡೆಗಳಲ್ಲಿ ಗಾಯಗಳಿದ್ದು, ಎರಡು ಗಂಭೀರವಾಗಿದೆ. ಮುಂಬೈ ಕ್ರೈಮ್ ಬ್ರ್ಯಾಂಚ್ ತನಿಖೆ ನಡೆಸುತ್ತಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.
ಬೆನ್ನಿನ ಮೂಳೆಗಳಿಗೆ ಹಾನಿಯಾಗಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿವೆ. ಪ್ರಸ್ತುತ ವೈದ್ಯರು ಅವರ ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ.
ಈ ದುರಂತ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶೀಘ್ರದಲ್ಲಿ ಕಳ್ಳರನ್ನು ಬಂಧಿಸುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.